Monday, August 15, 2022

Latest Posts

 ಶಿಕ್ಷಣದೊಂದಿಗೆ ಸಂಸ್ಕಾರವೂ ದೊರೆತರೆ ಮಾನವೀಯತೆ ಉಳಿಯಲು ಸಾಧ್ಯ: ಸಿದ್ದಗಂಗಾ ಶ್ರೀ

ಹೊಸದಿಗಂತ ವರದಿ, ಕೊಡ್ಲಿಪೇಟೆ:

ಶಿಕ್ಷಣದೊಂದಿಗೆ ಸಂಸ್ಕಾರವೂ ದೊರೆತರೆ ಮಾನವೀಯತೆ ಉಳಿಯಲು ಸಾಧ್ಯ ಎಂದು ಸಿದ್ದಗಂಗಾ ಮಠಾಧೀಶ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಸದಾಶಿವ ಸ್ವಾಮೀಜಿ ಪದವಿ ಪೂರ್ವ ಕಾಲೇಜಿನಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ಗ್ರಂಥಾಲಯ ಹಾಗೂ ಪ್ರಯೋಗಾಲಯದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಇಂದು ಶಾಲಾ ಕಾಲೇಜುಗಳು ಜನರನ್ನು ವಿದ್ಯಾವಂತರನ್ನಾಗಿ ಮಾಡುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿ ಭಾರಿ ಪೈಪೋಟಿಯೂ ನಡೆಯುತ್ತಿವೆ. ಪೋಷಕರು ತಮ್ಮ ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕೆಂದು ಗೊಂದಲಕ್ಕೆ ಒಳಗಾಗುವಷ್ಟು ವಿದ್ಯಾ ಸಂಸ್ಥೆಗಳು ಪ್ರಾರಂಭವಾಗುತ್ತಿವೆ. ಆದರೆ ವಿದ್ವತ್ ಇದ್ದರೂ ಮಾನವೀಯ ಮೌಲ್ಯಗಳು, ಸಂಸ್ಕಾರಗಳು ಮರೆಯಾಗುತ್ತಿವೆ ಎಂದು ಸ್ವಾಮೀಜಿ ವಿಷಾದಿಸಿದರು.
ವಿದ್ಯಾವಂತರಿಂದ ಸಮಾಜ ಬಹಳಷ್ಟು ನಿರೀಕ್ಷಿಸುತ್ತದೆ. ಆದರೆ ಇಂದು ಪರಿಸರ ಏನಾಗಿದೆ ಇದಕ್ಕೆ ಕಾರಣವೇನು ಎಂಬುದು ನಮ್ಮೆಲ್ಲರಿಗೂ ಅರಿವಿದೆ. ಹಿಂದೆ ಸಂಸ್ಕಾರವಿತ್ತು ಸಮಾಜ, ಪರಿಸರದ ಬಗ್ಗೆ ಕಾಳಜಿ ಇತ್ತು ಎಂದು ವಿಶ್ಲೇಷಿಸಿದರು.
ಶಿಕ್ಷಣವೂ ಮುಖ್ಯ; ಅದರೊಂದಿಗೆ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜದ ನಿರ್ಮಾಣ ಮಾಡಬೇಕಾಗಿದೆ ಎಂದರು.
ಕೊಡಗು ಜಿಲ್ಲೆಯಲ್ಲೂ ಅರಮೇರಿ ಕಳಂಚೇರಿ, ಕಿರಿಕೊಡ್ಲಿ, ಕಲ್ಲುಮಠಗಳು ವಿದ್ಯಾಸಂಸ್ಥೆಗಳನ್ನು ನಡೆಸುತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕೊಡ್ಲಿಪೇಟೆಯ ಮಹಡಿ ಮನೆ ಕುಟುಂಬದವರು ದಾನವಾಗಿ ನೀಡಿದ ಜಾಗದಲ್ಲಿ ಸದಾಶಿವ ಸ್ವಾಮೀಜಿ ವಿದ್ಯಾಪೀಠ ಹೆಮ್ಮರವಾಗಿ ಬೆಳೆಯುತ್ತಿದೆ. 35 ಮಕ್ಕಳಿಂದ ಆರಂಭವಾದ ಸಂಸ್ಥೆಯಲ್ಲಿ ಇಂದು 750 ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿರುವುದು ಶ್ಲಾಘನೀಯ ಎಂದು ನುಡಿದರು.
ಗ್ರಾಮೀಣ ಭಾಗದಲ್ಲಿ ಶಾಲೆಗಳನ್ನು ತೆರೆಯುವ ಮೂಲಕ ಈ ಭಾಗದ ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುತ್ತಿರುವುದು ಮಠಗಳಿಗೆ ಹೆಮ್ಮೆ ಎಂದೂ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಿರಿಕೊಡ್ಲಿ ಮಠಾಧೀಶ ಹಾಗೂ ವಿದ್ಯಾಸಂಸ್ಥೆಯ ಅಧ್ಯಕ್ಷ ಸದಾಶಿವ ಸ್ವಾಮೀಜಿ, ಶಿಡಿಗಳಲೆ ಮಠಾಧೀಶ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಶಿವಪ್ಪ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಮಹೇಶ್, ಮಲೆನಾಡು ವೀರಶೈವ ಮಹಾಸಭಾದ ಪ್ರಮುಖರಾದ ವಿದ್ಯಾಶಂಕರ್, ದೇವರಾಜು, ಬಸವಣ್ಣ, ಲೋಹಿತ್ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಜಯಗಳಿದವರನ್ನು ಸನ್ಮಾನಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss