Monday, July 4, 2022

Latest Posts

ಶಿಕ್ಷಣವು ವ್ಯಕ್ತಿ, ಸಮುದಾಯದ ಉನ್ನತಿಗೊಂದು ಅಸ್ತ್ರ: ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ

ಮಂಗಳೂರು: ಓದು ಬರಹ ಮಾತ್ರ ಶಿಕ್ಷಣವಲ್ಲ. ಶಿಕ್ಷಣ ಎಂಬುದು ವ್ಯಕ್ತಿ ಮತ್ತು ಸಮಾಜದ ಉನ್ನತಿಗಾಗಿರುವ ಒಂದು ವಿಶೇಷ ಸಾಧನವಾಗಿದೆ. ಶಿಕ್ಷಣದ ಜೊತೆಯಲ್ಲಿ ನಾಗರಿಕ ಪ್ರಜ್ಞೆಯನ್ನು ಬೆಳೆಸಿಕೊಂಡರೆ ಅದರಿಂದ ಎಲ್ಲರಿಗೂ ಒಳಿತಾಗುತ್ತದೆ. ಅಂತಹ ಮಾದರಿಗಳು ನಮಗೆ ಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಭಿಪ್ರಾಯ ಪಟ್ಟಿದ್ದಾರೆ.
ಅವರು ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮ ವ್ಯಾಪ್ತಿಯ ಮುಡಿಪು ನವಚೇತನ ಜೀವನ ಶಿಕ್ಷಣ ಕೇಂದ್ರದಲ್ಲಿ ಮಂಗಳವಾರ ಜರುಗಿದ ‘ವಿಶ್ವ ಸಾಕ್ಷಕತಾ ದಿನಾಚರಣೆ’ಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಹಕ್ಕುಗಳನ್ನು ಪ್ರತಿಪಾದಿಸುವ ಪ್ರತಿಯೊಬ್ಬರಿಗೂ ಕರ್ತವ್ಯದ ನೆನಪಿರ ಬೇಕು. ಅವೆರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪ್ರಸ್ತುತ ಕೋವಿಡ್-೧೯ ಸಂದರ್ಭದಲ್ಲಿ ಜನತೆ ನಿಯಮಗಳ ಅಡಿಯಲ್ಲಿ ನಡೆಯಬೇಕು. ಇದು ವ್ಯಕ್ತಿಗೂ ಸಮಾಜಕ್ಕೂ ಲೇಸು. ಅದು ಬಿಟ್ಟು ಸ್ವೇಚ್ಛೆಯಿಂದ ವರ್ತಿಸಿದರೆ ಓದು ಬರಹ ಕಲಿತಿದ್ದರೂ ನಿಷ್ಪ್ರಯೋಜಕ ಎಂದು ಹೇಳಿದ ಜಿಲ್ಲಾಧಿಕಾರಿ, ಪ್ರತಿಯೊಬ್ಬರು ನಿಯಮ ಮತ್ತು ಕಾನೂನು ವ್ಯಾಪ್ತಿಯಲ್ಲಿ ಸಾಗಬೇಕು ಎಂದರು.
ಬಾಳೆಪುಣಿ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಸಮುದಾಯ ಆಧಾರಿತವಾಗಿ ನಡೆಯುತ್ತಿರುವ ಚಟುವಟಿಕೆಗಳು ಸಮಯೋಜಿತವಾಗಿವೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ ಜಿಲ್ಲಾಧಿಕಾರಿ, ಕೊರೋನಾ ವಾರಿಯರ್ಸ್ ಆಗಿ ಆಶಾ ಕಾರ್ಯಕರ್ತರು ಸಲ್ಲಿಸುತ್ತಿರುವ ಸೇವೆ ಸ್ತುತ್ಯಾರ್ಹವಾಗಿದೆ ಎಂದರು.
ಸಮದಾಯದೆಡೆಗೆ ವಿವಿ
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ವಿಶ್ವ ಸಾಕ್ಷರತಾ ದಿನಾಚರಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿಕ್ಷಣ ಎಂಬುದು ಯಾವುದೇ ಒಬ್ಬ ವ್ಯಕ್ತಿಯ ಸೊತ್ತಲ್ಲ. ಅದು ಆಕ್ಷಾಂಕ್ಷಿಗಳೆಲ್ಲರಿಗೂ ತಲುಪಬೇಕು. ಸ್ವಸ್ಥ ಸಮಾಜಕ್ಕಾಗಿ ಸಾಕ್ಷರತೆ ಅತ್ಯಗತ್ಯವಾಗಿದೆ. ಅದಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯವು ಕಾರ್ಯಕ್ರಮ ಸಂಘಟಕರ ಜೊತೆಯಲ್ಲಿ ಕೈಜೋಡಿಸಲು ಉತ್ಸುಕವಾಗಿದೆ ಎಂದರು.
ವಿವಿಧ ಸಂಘಟನೆಗಳು ಮತ್ತು ವ್ಯಕ್ತಿಗಳ ಜೊತೆಗೂಡಿ ಬಾಳೆಪುಣಿ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಕುರಿತಾಗಿ ಮಂಗಳೂರು ವಿಶ್ವವಿದ್ಯಾನಿಲಯ ಅಧ್ಯಯನ ನಡೆಸಲಿದೆ. ವಿಶ್ವವಿದ್ಯಾನಿಲಯವು ಸಮುದಾಯದಲ್ಲಿ ಬೆರತು ಕಾರ್ಯವೆಸಗಲು ಆಸಕ್ತಿ ಹೊಂದಿದೆ. ವಿಶ್ವವಿದ್ಯಾನಿಲಯದ ಮಿತಿಯೊಳಗೆ ಮುಂದಿನ ದಿನಗಳಲ್ಲಿ ಅಂತಹ ಕಾರ್ಯಕ್ರಮಗಳನ್ನು ಜೋಡಿಸಿಕೊಳ್ಳಲಾಗುವುದು ಎಂದು ಕುಲಪತಿ ಹೇಳಿದರು.
ಬಾಳೆಪುಣಿ ಗ್ರಾಮ ಪಂಚಾಯತು ಪಿಡಿಒ ಸುನಿಲ್‌ಕುಮಾರ್, ಉದ್ಯಮಿಗಳಾದ ರಮೇಶ ಶೇಣವ, ಎನ್.ಶಿವಪ್ರಸಾದ್ ಆಳ್ವ, ಸೆಲ್ಕೋ ಫೌಂಡೇಶನ್ ಜಿಲ್ಲಾ ಪ್ರಬಂಧಕ ಸಂಜಿತ್, ಮಣಿಪಾಲ ಸಮುದಾಯ ಬಾನುಲಿಯ ಶ್ಯಾಮ್ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಜನ ಶಿಕ್ಷಣ ಟ್ರಸ್ಟ್, ಬಾಳೇಪುಣಿ ಗ್ರಾಮ ಪಂಚಾಯತು, ಅಪ್ನಾದೇಶ್ ಬಳಗ, ಸೆಲ್ಕೋ ಫೌಂಡೇಶನ್, ಗ್ರಾಮ ವಿಕಾಸ ಕೇಂದ್ರ, ಪ್ರಜ್ಞಾ ವೃತ್ತಿಪರ ತರಬೇತಿ ಕೇಂದ್ರ, ಸುಗ್ರಾಮ ವೇದಿಕೆ ಮೊದಲಾದ ಸಂಸ್ಥೆಗಳ ಆಶ್ರಯದಲ್ಲಿ ಕಾರ್ಯಕ್ರಮವನ್ನು ಸಂಯೋಜಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಜನಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss