ಹೊಸದಿಗಂತ ವರದಿ, ಮಂಗಳೂರು:
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯನ್ನು ಜನತೆಗೆ ತಲುಪಿಸಲು ವಿದ್ಯಾಭಾರತಿ ಸಂಘಟನೆ ಪ್ರಯತ್ನಿಸುತ್ತಿದೆ. ಈಗಾಗಲೇ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ತಿಳುವಳಿಕೆ ಮೂಡಿಸುವ ಕಾರ್ಯ ನಡೆಸಿದೆ. ಹೊಸ ಶಿಕ್ಷಣ ನೀತಿ ಕುರಿತಂತೆ ಎಲ್ಲೆಡೆ ಮಂಥನ, ಸಂವಾದಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಪೋರ್ಟಲ್ ಸದಸ್ಯ, ರಾಜ್ಯ ಸರ್ಕಾರದ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ ಹೇಳಿದ್ದಾರೆ.
ಮೈಸೂರಿನ ಸಾಹಿತ್ಯ ಸುಧೆ ಪ್ರಕಾಶನ ಪ್ರಕಟಿಸಿದ ಪ್ರೊ.ಎ.ಎಂ.ನರಹರಿಯವರ `ಶಿಕ್ಷಣ ಮನ್ವಂತರ-ರಾಷ್ಟ್ರೀಯ ಶಿಕ್ಷಣ ನೀತಿ-2020’ಕೃತಿ ಕುರಿತಂತೆ ಮಂಗಳೂರಿನ ಅಮುಕ್ತ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಶಿಕ್ಷಣ ಸಂವಾದದಲ್ಲಿ ಅವರು ಮಾತನಾಡಿದರು.
ಶಿಕ್ಷಣ ನೀತಿಯನ್ನು ಜನಮಾನಸಕ್ಕೆ ಮುಟ್ಟಿಸುವಲ್ಲಿ ಈಗಾಗಲೇ ಮೈಎನ್ಇಪಿ ಡಾಟ್ ಇನ್ ವೆಬ್ ಪೋರ್ಟಲ್ನಲ್ಲಿ ೩೫ಕ್ಕೂ ಹೆಚ್ಚು ವೆಬಿನಾರ್ಗಳನ್ನು ವಿದ್ಯಾಭಾರತಿ ಸಂಘಟನೆ ಮಾಡಿದೆ. ಮುಂದೆ ಯುಜಿಸಿ ಐಎನ್ಐ ಮುಖ್ಯಸ್ಥರೊಂದಿಗೆ ಸಮುದಾಯ ಮತ್ತು ಶಿಕ್ಷಣ ಬಗ್ಗೆ ಚರ್ಚೆ ನಡೆಸಲಿದೆ. ಕೇಂದ್ರ ಸರ್ಕಾರವು ಅತ್ಯಂತ ಮಹತ್ವವಾದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ಹಿಂದಿನ ನಾಲ್ಕೈದು ಶಿಕ್ಷಣ ನೀತಿಗಳ ಪರಿಣಾಮ ಮತ್ತು ಜಾಗತಿಕ ಆಗು ಹೋಗುಗಳನ್ನು ಗಮನದಲ್ಲಿರಿಸಿ ರೂಪಿಸಿದೆ ಎಂದವರು ಹೇಳಿದರು.