ದಿಗಂತ ವರದಿ, ಮಂಗಳೂರು:
ಶಿರಾ ಮತ್ತು ಆರ್ಆರ್ ನಗರ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಶಿರಾದಲ್ಲಿ 20 ಸಾವಿರ, ಆರ್ಆರ್ ನಗರದಲ್ಲಿ 40 ಸಾವಿರ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಕಾಂಗ್ರೆಸ್ನಲ್ಲಿ ಶಿರಾ ಉಪಚುನಾವಣೆಯ ಉಸ್ತುವಾರಿಯನ್ನು ಸಿದ್ದರಾಮಯ್ಯ ವಹಿಸಿಕೊಂಡರೆ, ಆರ್ಆರ್ ನಗರದಲ್ಲಿ ಡಿಕೆಶಿ ಉಸ್ತುವಾರಿಯಾಗಿದ್ದಾರೆ. ಬಿಜೆಪಿಗೆ ಶಿರಾದಲ್ಲಿ ಡಿಕೆಶಿ, ಆರ್ಆರ್ ನಗರದಲ್ಲಿ ಸಿದ್ದರಾಮಯ್ಯ ಸಹಕಾರ ನೀಡಿದ್ದಾರೆ… ಇದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಹೇಳಿಕೆ.
ಆಂತರಿಕ ಜಗಳದಿಂದ ರಾಜ್ಯದಲ್ಲಿ ಯಾವುದೇ ಸ್ಥಾನವನ್ನು ಉಳಿಸಿಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸುವ ಪರಿಸ್ಥಿತಿ ಬಂದಿದೆ. ಅದಕ್ಕಾಗಿ ಪ್ರತಿದಿನ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಡಿಕೆಶಿ ಪ್ರಭಾವಿಯಾಗಿ ತಾನು ಮೂಲೆಗುಂಪು ಆಗುತ್ತೇನೆ ಎಂಬ ಭಯ ಸಿದ್ದರಾಮಯ್ಯಗೆ ಕಾಡುತ್ತಿದೆ ಎಂದು ನಳಿನ್ ಹೇಳಿದರು.
ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಜಗಳ ನಡೆಯುತ್ತಿದೆ. ಈ ಜಗಳದ ಭಾಗವಾಗಿಯೇ ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ ಗಲಭೆ ನಡೆದಿದೆ. ಅಖಂಡ ಶ್ರೀನಿವಾಸಮೂರ್ತಿ ಸಿದ್ದರಾಮಯ್ಯ ಪರ ಇದ್ದರೆ, ಸಂಪತ್ರಾಜ್ ಡಿಕೆಶಿ ಗುಂಪಿನವರು. ದೌರ್ಜನ್ಯಕ್ಕೆ ಒಳಗಾದ ಕಾಂಗ್ರೆಸ್ ಶಾಸಕ ಅಖಂಡ ನೆರವಿಗೆ ನಿಲ್ಲದ ಡಿಕೆಶಿ, ಸಂಪತ್ರಾಜ್ ರಕ್ಷಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ನಲ್ಲಿ ಶಾಸಕರಿಗೆ ರಕ್ಷಣೆ ಇಲ್ಲದಾಗಿದೆ. ಪ್ರತಿಪಕ್ಷಗಳ ೧೫ ಶಾಸಕರು ಬಿಜೆಪಿ ಸೇರಲು ಸಿದ್ದರಾಗಿದ್ದಾರೆ ಎಂದರು.