ಶಿವಮೊಗ್ಗ: ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರದಲ್ಲಿ ರೈತರಿಗೆ ನೆರವಾಗುವಂತೆ ಹಲವು ಯಂತ್ರಗಳನ್ನು ಸಿದ್ಧಪಡಿಸಿದ್ದಾರೆ.
ಕಾಲೇಜಿನ ಅಗ್ರಿಕಲ್ಚರ್ ಅಂಡ್ ರೂರಲ್ ಟೆಕ್ನಾಲಜಿ ಕೇಂದ್ರದ ಮೂಲಕ ಇದನ್ನು ಸಿದ್ಧಪಡಿಸಿದ್ದು, ಸೋಮವಾರ ಇವುಗಳ ಪ್ರದರ್ಶನ ನಡೆಯಿತು.
ಜಮೀನು ಮತ್ತು ತೋಟಗಳಲ್ಲಿ ಸ್ವಯಂ ಪೈಪ್ ಲೈನ್ ಅಳವಡಿಕೆ ಮತ್ತು ಕಾಲುವೆ ನಿರ್ಮಿಸುವ ಟ್ರೆಚಿಂಗ್ ಯಂತ್ರವನ್ನು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ವಿನಾಯಕ ಗಂಗೋಜಿ, ರಕ್ಷಿತ್ ಹೆಚ್.ಆರ್, ಶಿಬಿನ್ ಪೌಲ್, ಪ್ರಮೋದ್ ರಾಮಗೌಡ ತಂಡ ಪ್ರಾಧ್ಯಾಪಕ ಡಾ.ಈ ಬಸವರಾಜ್ ಮಾರ್ಗದರ್ಶನದಲ್ಲಿ ರೂಪಿಸಿದೆ. ಕೆಲವು ಕಡೆ ಟಿಲ್ಲರ್ ಮತ್ತು ಟ್ರಾಕ್ಟರ್ ಹೋಗಲಾಗದ ಪ್ರದೇಶಗಳಲ್ಲಿ ಸುಲಭವಾಗಿ ಈ ಯಂತ್ರವನ್ನು ಕೊಂಡೊಯ್ಯಬಹುದಾಗಿದೆ. ತೇವಾಂಶವಿರುವ ಜಾಗದಲ್ಲಿ ಟ್ರೆಚಿಂಗ್ ಮೂಲಕ ಬೆಳೆಗಳ ನಿರ್ವಹಣೆ ಮಾಡಬಹುದಾಗಿದೆ. ಈ ಮೂಲಕ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬಹುದು ಎಂಬುದು ಈ ಹುಡುಗರ ಲೆಕ್ಕಾಚಾರ.
ಅಗ್ರಿ ಬೋಟ್ ಜಿಂಜರ್ ಸ್ಪ್ರೇಯರ್:
ರೈತರು ಬೆಳೆದ ಶುಂಠಿ ಬೆಳೆಗೆ ಸ್ವಯಂ ಚಾಲಿತವಾಗಿ ಕೀಟನಾಶಕ ಸಿಂಪಡಣೆ ಮಾಡುವ ಅಗ್ರಿ ಬೋಟ್ ಜಿಂಜರ್ ಸ್ಪ್ರೇಯರ್ ಯಂತ್ರವನ್ನು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಸಂಜೀವ್.ಎಸ್.ಎಂ, ಶಶಾಂಕ್.ಬಿ.ಟಿ, ವಿಷ್ಣು ಬಿ.ಜೆ, ವಿಜೇತ್ ಜೆ.ಎಂ ತಂಡವು ಪ್ರಾಧ್ಯಾಪಕ ಡಾ.ಈ ಬಸವರಾಜ್ ಮಾರ್ಗದರ್ಶನದಲ್ಲಿ ನಿರ್ಮಿಸಿದೆ. ಕ್ಯಾಮೆರಾ ಸಹಾಯದ ಮೂಲಕ ಬೆಳೆ ಬಂದಿರುವ ಪ್ರದೇಶದಲ್ಲಿ ಮಾತ್ರ ಅವಶ್ಯಕ ಕೀಟ ಸಿಂಪಡಣೆಯನ್ನು ಈ ಯಂತ್ರ ಮಾಡುವುದು ವಿಶೇಷ. ಬೆಳೆ ಬರದ ಜಾಗದಲ್ಲಿ ಸ್ವಯಂಚಾಲಿತವಾಗಿ ಕೀಟನಾಶಕ ಸಿಂಪಡಣೆ ನಿಲ್ಲಿಸುವ ಯೋಜನೆ ಇದರಲ್ಲಿದೆ.
ಕಾಲೇಜು ಪ್ರಾಂಶುಪಾಲ ಡಾ.ಮಹದೇವ ಸ್ವಾಮಿ ನೂತನ ಆವಿಷ್ಕಾರ ವೀಕ್ಷಿಸಿ ಅಭಿನಂದಿಸಿದರು.
ಬೆಳೆ ನಾಶ ತಡೆಯಲು ಯಂತ್ರ
ಬೆಳೆಗಳನ್ನು ತಿನ್ನಲು ದಾಳಿ ಮಾಡುವ ಕಾಡು ಪ್ರಾಣಿಗಳನ್ನು ತಡೆಯುವ ಮತ್ತು ಮನೆಯಲ್ಲಿರುವ ರೈತನಿಗೆ ಎಚ್ಚರಿಕೆ ನೀಡುವಂತೆ ರೂಪಿಸಿರುವ ಸ್ಮಾರ್ಟ್ ಕ್ರಾಪ್ ಪ್ರೊಟೆಕ್ಷನ್ ಯೋಜನೆಯನ್ನು ಎಲೆಕ್ಟ್ರಾನಿಕ್ ಅಂಡ್ ಟೆಲಿಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿಗಳಾದ ಸೌಮ್ಯ ಬಿ.ಎನ್, ಸುಚಿತ್ರ ಆರ್.ಸಿ, ನೇತ್ರಾವತಿ ಬಿ.ಎ, ಯಶಸ್ವಿನಿ ಕೆ.ಎಸ್ ತಂಡ ಸಹ ಪ್ರಾಧ್ಯಾಪಕಿ ಅಪರ್ಣ ಅವರ ಮಾರ್ಗದರ್ಶನದಲ್ಲಿ ಸಿದ್ದಪಡಿಸಿದೆ.
ಪ್ರಾಣಿಗಳ ದಾಳಿಯನ್ನು ತಡೆಯಲು ಸಹಕಾರಿ
ಬೆಳೆಯ ಪ್ರದೇಶದ ಸುತ್ತ ನಿರ್ಮಿಸಿದ್ದ ಬೇಲಿಗೆ ಕ್ಯಾಮೆರಾ ಮೂಲಕ ದಾಳಿ ಮಾಡಲು ಆಗಮಿಸುತ್ತಿರುವ ಪ್ರಾಣಿಗಳು ಮತ್ತು ಅವುಗಳ ಸಂಖ್ಯೆಯನ್ನು ರೈತನ ಮೊಬೈಲ್ ಗೆ ಮೆಸೇಜ್ ಮಾಡಿ ಎಚ್ಚರಿಸುವುದರ ಜೊತೆಗೆ ಜೋರಾದ ಶಬ್ದದ ಮೂಲಕ ಪ್ರಾಣಿಗಳ ದಾಳಿಯನ್ನು ತಡೆಯುವ ಪ್ರಯತ್ನವನ್ನು ಈ ಯಂತ್ರ ಮಾಡಲಿದೆ ಎಂದು ವಿದ್ಯಾರ್ಥಿಗಳು ವಿವರಿಸಿದರು.