ಶಿವಮೊಗ್ಗ: ಉದ್ಯೋಗ ಖಾತರಿ ಯೋಜನೆ ಅಡಿ ಇನ್ನು ಮುಂದೆ ನೂರೈವತ್ತು ದಿನಗಳ ಕಾಲ ಉದ್ಯೋಗ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಡಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಈ ಹಿಂದೆ ಉದ್ಯೋಗ ಖಾತರಿ ಯೋಜನೆಗೆ 60 ಸಾವಿರ ಕೋಟಿ ಬಿಡುಗಡೆ ಮಾಡಿತ್ತು. ಈಗ ಘೋಷಣೆ ಮಾಡಿರುವ ಇಪ್ಪತ್ತು ಲಕ್ಷ ಕೋಟಿ ಪ್ಯಾಕೇಜ್ ನಲ್ಲಿ ನಲವತ್ತು ಸಾವಿರ ಕೋಟಿ ಉದ್ಯೋಗ ಖಾತರಿ ಯೋಜನೆಗೆ ಘೋಷಿಸಿದ್ದಾರೆ. ಒಟ್ಟು ಒಂದು ಲಕ್ಷ ಕೋಟಿ ಸಿಕ್ಕಂತಾಗಿದೆ. ಹಾಗಾಗಿ ಇನ್ನು ಮುಂದೆ 150 ದಿನ ಉದ್ಯೋಗ ನೀಡಲಾಗುತ್ತದೆ ಎಂದರು.
618 ಲಕ್ಷ ರೂ. ಕಾಮಗಾರಿಗೆ ಚಾಲನೆ: ಶಿವಮೊಗ್ಗ ನಗರದಲ್ಲಿ ಮೇ 23 ಹಾಗೂ 25 ರಂದು 618 ಲಕ್ಷ ರೂ.ಗಳ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಈಶ್ವರಪ್ಪ ಇದೇ ವೇಳೆ ತಿಳಿಸಿದರು.
ಪ್ರಮುಖರಾದ ದತ್ತಾತ್ರಿ, ಚನ್ನಬಸಪ್ಪ, ಸುವರ್ಣ ಶಂಕರ್, ಸುರೇಖಾ ಮುರುಳೀಧರ್, ಬಾಲು, ಅಣ್ಣಪ್ಪ ಸುದ್ದಿಗೋಷ್ಟಿಯಲ್ಲಿದ್ದರು.