ಶಿವಮೊಗ್ಗ: ಎಂಪಿಎಂ ಪುನರಾರಂಭಿಸುವ ಪೂರಕ ಚಟುವಟಿಕೆಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು. ಭದ್ರಾವತಿ ಎಂಪಿಎಂಗೆ ಭೇಟಿ ನೀಡಿ ಮಾತನಾಡಿದ ಅವರು, ಸಂಸ್ಥೆಯ ವಶದಲ್ಲಿರುವ ಸುಮಾರು 70 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಿಂತಿರುಗಿಸದಿರಲು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಭೂಮಿಯನ್ನು ಎಂಪಿಎಂ ವಶದಲ್ಲಿಯೇ ಇರಿಸಲು ನಿರ್ಧರಿಸಿರುವುದು ಸಂಸ್ಥೆಯನ್ನು ಪುನರಾರಂಭಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎಂದರು.
ಸಂಸ್ಥೆ ಪುನರಾರಂಭಿಸಲು ಖಾಸಗಿ ಬಂಡವಾಳಗಾರರನ್ನು ಆಕರ್ಷಿಸುವ ಪ್ರಯತ್ನ ನಡೆದಿದ್ದು, ಈಗಾಗಲೇ ಹಲವಾರು ಖಾಸಗಿ ಬಂಡವಾಳಗಾರರೊಂದಿಗೆ ಮಾತುಕತೆಯನ್ನು ಆರಂಭಿಸಲಾಗಿದೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಎಂಪಿಎಂ ಪುನಾರಂಭಕ್ಕೆ ಎಲ್ಲಾ ರೀತಿಯ ಪ್ರಯತ್ನ ನಡೆದಿದೆ. 70 ಸಾವಿರ ಹೆಕ್ಟೇರ್ ನೀಲಗಿರಿ ಪ್ಲಾಂಟೇಷನ್, 300ಎಕರೆ ಟೌನ್ ಶಿಪ್ ಎಂಪಿಎಂ ಸ್ವಾಧೀನದಲ್ಲೇ ಉಳಿಸಲು ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
1037 ಖಾಯಂ ಉದ್ಯೋಗಿಗಳ ಪೈಕಿ 773 ಮಂದಿ ವಿಆರ್ಎಸ್ ತೆಗೆದುಕೊಂಡಿದ್ದಾರೆ. 119 ಮಂದಿ ಡೆಪ್ಯುಟೇಷನ್, 93 ಮಂದಿ ಉಳಿದಿದ್ದಾರೆ. ಪ್ರಸ್ತುತ 300 ಮಂದಿ ವಾಚರ್ ಇದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಸಂಗಮೇಶ್, ರುದ್ರೇಗೌಡ, ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ, ಜಿಲ್ಲಾಧಿಕಾರಿ ಶಿವಕುಮಾರ್, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಡಿ.ಎಸ್. ಅರುಣ್, ಷಡಾಕ್ಷರಿ ಮತ್ತಿತರರಿದ್ದರು.