ಶಿವಮೊಗ್ಗ: ಎಸ್ಎಸ್ಎಲ್ ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಆಗಮಿಸಿದ್ದ ಶಿಕ್ಷಕರೋರವರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಭದ್ರಾವತಿ ಈಶ್ವರಮ್ಮ ಪ್ರೌಢಶಾಲೆಯ ಸಮಾಜ ವಿಜ್ನಾನ ಶಿಕ್ಷಕರಾಗಿದ್ದ ಕುಮಾರ್ (48) ಮೃತಪಟ್ಟಿರುವ ಶಿಕ್ಷಕರಾಗಿದ್ದಾರೆ. ಸೋಮವಾರದಿಂದ ಆರಂಭವಾಗಿರುವ ಎಸ್ಎಸ್ಎಲ್ ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಇವರು ಆಗಮಿಸುತ್ತಿದ್ದರು. ಇಲ್ಲಿನ ರಾಷ್ಟ್ರೀಯ ಶಿಕ್ಷಣ ಪ್ರೌಢಶಾಲೆಯಲ್ಲಿ ಮೌಲ್ಯಮಾಪನದಲ್ಲಿ ಪಾಲ್ಗೊಂಡಿದ್ದರು.
ಬುಧವಾರ ಮಧ್ಯಾಹ್ನದವರೆಗೂ ಮೌಲ್ಯಮಾಪನ ನಡೆಸಿದ್ದರು. ಊಟಕ್ಕೆ ತೆರಳುವ ಸಂದರ್ಭದಲ್ಲಿ ಶಾಲೆ ಆವರಣದಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅಲ್ಲಿದ್ದ ಶಿಕ್ಷಕರು 108 ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದರು. ಕೆಲವೇ ನಿಮಿಷಗಳಲ್ಲಿ ಬಂದ ಆ್ಯಂಬುಲೆನ್ಸ್ ಮೂಲಕ ಕುಮಾರ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಯಿತು. ಪರೀಕ್ಷಿಸಿದ ವೈದ್ಯರು ಶಿಕ್ಷಕರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಶಿಕ್ಷಕ ಕುಮಾರ್ ನಿಧನಕ್ಕೆ ಶಿಕ್ಷಕ ವೃಂದ ಸಂತಾಪ ಸೂಚಿಸಿದೆ.