Wednesday, July 6, 2022

Latest Posts

ಶಿವಮೊಗ್ಗ| ಒಂದೇ ವಾರದಲ್ಲಿ ನಾಲ್ಕು ಬಾಲ್ಯ ವಿವಾಹಕ್ಕೆ ತಡೆ…!

ಶಿವಮೊಗ್ಗ: ಬಾಲ್ಯವಿವಾಹ ನಡೆಸಲು ಮುಂದಾಗಿದ್ದ ನಾಲ್ಕು ಪ್ರಕರಣಗಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಆಯಾ ಜಾಗದ ಗ್ರಾಮಸ್ಥರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರ ನೆರವಿನೊಂದಿಗೆ ಪತ್ತೆ ಹಚ್ಚಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯ ಅಧಿಕಾರಿಗಳು ಮತ್ತು ಪೊಲೀಸರ ಸಹಯೋಗದಲ್ಲಿ ಖಚಿತ ಮಾಹಿತಿ ಮೇರೆಗೆ ನಾಲ್ಕು ಕಡೆ ದಾಳಿ ನಡೆಸಲಾಗಿದೆ. ಶಿವಮೊಗ್ಗ ತಾಲ್ಲೂಕು ಗೋಂದಿಚಟ್ನಳ್ಳಿಯ 16 ವರ್ಷದ ಅಪ್ರಾಪ್ತ ಬಾಲಕಿಗೆ ಮದುವೆ ಮಾಡಲು ಮುಂದಾಗಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ್ದು, ಅದನ್ನು ನಿಲ್ಲಿಸಿ ಬಾಲ್ಯ ವಿವಾಹ ತಡೆಯುವ ಜೊತೆಗೆ ಲಿಖಿತ ಹೇಳಿಕೆ ಪಡೆದು ಕ್ರಮದ ಎಚ್ಚರಿಕೆಯನ್ನು ನೀಡಲಾಗಿದೆ.

ಶಿಕಾರಿಪುರ ತಾಲೂಕು ಹಳೆ ಮುತ್ತಿಗೆ ಗ್ರಾಮದ 15 ವರ್ಷದ ಬಾಲಕಿಗೆ ವಿವಾಹ ಮಾಡಲು ಮುಂದಾಗಿದ್ದನ್ನು ಈ ತಂಡ ಪತ್ತೆ ಹಚ್ಚಿದೆ. ಎಚ್ಚರಿಕೆ ನೀಡಿ ವಿವಾಹ ತಡೆಗಟ್ಟಲಾಗಿದೆ. ಶಿವಮೊಗ್ಗ ತಾಲ್ಲೂಕಿನ ಗ್ರಾಮವೊಂದರ 16 ವರ್ಷದ ಬಾಲಕಿಯನ್ನು ನ್ಯಾಮತಿ ತಾಲೂಕಿನ ಗ್ರಾಮವೊಂದರ 21 ವರ್ಷದ ಯುವಕನ ಜೊತೆ ಮದುವೆ ಮಾಡಲು ಮುಂದಾಗಿದ್ದರು. ದಾವಣಗೆರೆ ಜಿಲ್ಲಾ ಮಕ್ಕಳ ಸಹಾಯವಾಣಿಗೆ ಬಂದ ದೂರಿನನ್ವಯ ತಹಶೀಲ್ದಾರರು ಹಾಗೂ ಇತರ ಅಧಿಕಾರಿಗಳು ದಾಳಿ ನಡೆಸಿ ಬಾಲ್ಯ ವಿವಾಹವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಭದ್ರಾವತಿ ತಾಲೂಕಿನ ಹೊರಗಿನ ಕೊಪ್ಪದ 17 ವರ್ಷದ ಬಾಲಕಿಗೆ ವಿವಾಹ ನಡೆಸುತ್ತಿದ್ದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ಘಟಕ ಪೊಲೀಸರ ನೆರವಿನೊಂದಿಗೆ ದಾಳಿ ನಡೆಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss