ಹೊಸ ದಿಗಂತ ವರದಿ, ಶಿವಮೊಗ್ಗ:
ಸಾಗರದ ಪ್ರತಿಷ್ಟಿತ ಸಂಜಯ್ ಮೆಮೋರಿಯಲ್ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರಿಂದ ಕಾಲೇಜಿನ ಆಡಳಿತ ಮಂಡಳಿ
ವಿರುದ್ಧ ಬುಧವಾರ ಸಂಜೆ ಕಾಲೇಜಿನ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.
ಕಾಲೇಜಿನ ಆಡಳಿತಾಧಿಕಾರಿ ಗುರುಪ್ರಸಾದ್ ವರ್ತನೆಯಿಂದ ಉಪನ್ಯಾಸಕರು ಕೆಲಸ ಮಾಡದ ವಾತಾವರಣ ನಿರ್ಮಾಣವಾಗಿದೆ. ಸಣ್ಣಪುಟ್ಟ ವಿಷಯಗಳಿಗೂ ನೋಟಿಸ್ ನೀಡಿ ಸಸ್ಪೆಂಡ್ ಮಟ್ಟದವರೆಗೂ ವಿಷಯವನ್ನು ಕೊಂಡೊಯ್ಯಲಾಗುತ್ತಿದೆ ಎಂದು ಉಪನ್ಯಾಸಕರು ಆರೋಪಿಸಿದರು.
ಪ್ರತಿತಿಂಗಳ ವೇತನದಲ್ಲಿ ಶೇ. 10ರಷ್ಟು ಹಣವನ್ನು ಆಡಳಿತ ಮಂಡಳಿಗೆ ನೀಡಬೇಕು ಎಂದು ನಿಯಮಬಾಹಿರವಾಗಿ ಒತ್ತಡ ಹೇರಲಾಗುತ್ತಿದೆ. ಉಪನ್ಯಾಸಕರ ಬಾಕಿ ವೇತನದ ಅನುದಾನದ ಮೊತ್ತ ರೂ. 1.68 ಕೋಟಿ ಬಿಡುಗಡೆಯಾಗಿ ಆರು ತಿಂಗಳು ಕಳೆದಿದ್ದರೂ ಆ ಹಣವನ್ನು ನಮಗೆ ನೀಡದೆ ಆಡಳಿತ ಮಂಡಳಿ ಉಳಿಸಿಕೊಂಡಿದೆ ಎಂದು ಉಪನ್ಯಾಸಕರು ದೂರಿದರು.
ಕಾಗೋಡು ಭೇಟಿ…
ಸ್ಥಳಕ್ಕೆ ಆಗಮಿಸಿದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಪರಿಹಾರ ಕಂಡುಕೊಳ್ಳುವ ಮಾರ್ಗವಿದ್ದು, ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಮನವಿ ಮಾಡಿದ ಅವರು ಆಡಳಿತ ಮಂಡಳಿ ಲೋಪವಿದ್ದರೆ ಸರಿಪಡಿಸಿಕೊಳ್ಳುವ ಭರವಸೆ ನೀಡಿದರು.
ಉಪನ್ಯಾಸಕರಾದ ಕ್ರೊೇಶ್, ಸತೀಶ್, ಗಿರೀಶ್, ಸುರೇಶ್, ಸುನೀಲ್ ದಾಸ್, ಪ್ರತಾಪ್ ಸಿಂಗ್, ಜಯಲಕ್ಷ್ಮೀ, ಮೀನಾಕ್ಷಿ ಸೇರಿದಂತೆ 80 ಉಪನ್ಯಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.