ಶಿವಮೊಗ್ಗ: ಜಿಲ್ಲೆಯ ಎಲ್ಲಾ 271 ಗ್ರಾ ಪಂ ವ್ಯಾಪ್ತಿಯಲ್ಲಿರುವ ಕೆರೆಗಳ ಸುತ್ತ ಕನಿಷ್ಟ 3ಲಕ್ಷ ಸಸಿ ನೆಡುವ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಅವರು ಶನಿವಾರ ವೀರಣ್ಣನಬೆನವಳ್ಳಿ ಗ್ರಾಮದ ಕೆರೆ ದಂಡೆಯಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದರು.
ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆರೆಗಳ ಸುತ್ತ 1ಸಾವಿರ ಸಸಿಗಳನ್ನು ನೆಡುವ ಕಾರ್ಯವನ್ನು ಆರಂಭಿಸಲಾಗಿದೆ. ಇದರಿಂದ ಕೆರೆಗಳಿಗೆ ಗಡಿಗಳನ್ನು ಗುರುತಿಸಿ ಒತ್ತುವರಿ ತಡೆಯಲು ಸಾಧ್ಯವಿದೆ ಎಂದರು.
ನಗರ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ತೆರವುಗೊಳಿಸಲಾಗುವ ಮರಗಳಿಗೆ ಪರ್ಯಾಯವಾಗಿ ಸಸಿಗಳನ್ನು ನೆಡಲು ಸೂಚಿಸಲಾಗಿದೆ ಎಂದರು.
ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೇಸಾಯಿ ಮಾತನಾಡಿ, ಸಾಮಾಜಿಕ ಅರಣ್ಯ ವಿಭಾಗದ ವತಿಯಿಂದ 77ಹೆಕ್ಟೇರ್ ಬ್ಲಾಕ್ ನೆಡುತೋಪುವಿನಲ್ಲಿ 84700 ಗಿಡಗಳನ್ನು, 55 ಕಿಮಿ ರಸ್ತೆ ಬದಿ ನೆಡುತೋಪುವಿನಲ್ಲಿ 15ಸಾವಿರ ಸಸಿಗಳನ್ನು ಮತ್ತು ಕೃಷಿ ಅರಣ್ಯ ಕಾರ್ಯಕ್ರಮದಡಿಯಲ್ಲಿ ರೈತರ ಜಮೀನಿನಲ್ಲಿ 466 ಹೆಕ್ಟೇರ್ ವಿಸ್ತೀರ್ಣದಲ್ಲಿ 3.69ಲಕ್ಷ ಸಸಿಗಳನ್ನು ನೆಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಜಿಪಂ ಸಿಇಒ ಎಂ.ಎಲ್.ವೈಶಾಲಿ ಹಾಜರಿದ್ದರು.