ಶಿವಮೊಗ್ಗ: ಮುಖ್ಯಮಂತ್ರಿಗಳ ತವರು ಜಿಲ್ಲೇಯಲ್ಲೇ ಕೊರೋನಾ ನಿರ್ವಹಣೆಯಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಆರೋಪಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲೂ ಕೊರೋನಾ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಅನುಮಾನ ಇದೆ. ಈ ಬಗ್ಗೆ ಮಾಹಿತಿ ನೀಡುವಂತೆ ಕೋರಿ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದಿದ್ದರೂ ಮಾಹಿತಿ ಕೊಟ್ಟಿಲ್ಲ. ಹಾಗಾಗಿ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಲೆಕ್ಕ ಕೊಡಿ ಚಳುವಳಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಕೊರೋನಾ ಶಂಕಿತರನ್ನು ಮೆಗ್ಗಾನ್ ಆಸ್ಪತ್ರೆ ಬಳಿಕ ಈಗ ಹಾಸ್ಟೆಲ್ ಗಳಲ್ಲಿ ಇರಿಸಿದ್ದಾರೆ. ಅಲ್ಲಿ ವ್ಯವಸ್ಥೆ ಸರಿ ಇಲ್ಲ. ಈ ಬಗ್ಗೆ ಜಾಲತಾಣದಲ್ಲಿ ಎರಡು ದಿನಗಳ ಹಿಂದೆ ಆಡಿಯೋ ಹರಿದಾಡಿದೆ. ಹಾಸ್ಟೆಲ್ ನಲ್ಲಿ ಬಿಸಿ ನೀರು ಇಲ್ಲ. ಊಟೋಪಚಾರ ಹದಗೆಟ್ಟಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಮೀಟಿಂಗ್ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಈ ಕಥೆಯಾದರೆ ಹೇಗೆ ಎಂದು ಪ್ರಶ್ನಿಸಿದರು.