ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರಿಂದ ಹಲವೆಡೆ ಸತತ ದಾಳಿ: ನಗದು, ಸ್ವತ್ತು ವಶ, ಆರೋಪಿಗಳ ಬಂಧನ

0
78

ಶಿವಮೊಗ್ಗ: ಗ್ರಾಮಾಂತರ ಠಾಣೆ ಪೊಲೀಸರು ಜೂನ್ 13 ರಿಂದ  ಹಲವೆಡೆ ಸತತ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, ನಗದು, ಸ್ವತ್ತು ವಶಕ್ಕೆ ಪಡೆದುಕೊಂಡಿದ್ದಾರೆ.
ಜೂನ್ 13 ರಂದು ಹರಿಗೆ ಹಾಥಿನಗರ ಪಾರ್ಕ್ ಬಳಿ ದಾಳಿ ನಡೆಸಿ ಹರಿಗೆ ನಿವಾಸಿ ಪುನೀತ್ ಎಂಬುವನನ್ನು ಬಂಧಿಸಿ ಸುಮಾರು 500 ಗ್ರಾಂ ಗಾಂಜಾ ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜೂನ್ 15 ರಂದು ಚಿಕ್ಕಲ್ ಮುಖ್ಯರಸ್ತೆಯಲ್ಲಿ ಚನ್ನಗಿರಿ ತಾಲೂಕು ತ್ಯಾವಣಿಗೆರೆ ಗ್ರಾಮದ ರವಿ ಎಂಬುವನನ್ನು ಬಂಧಿಸಿ ಸುಮಾರು 3 ಕೆಜಿ ಶ್ರೀಗಂಧ ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜೂನ್ 16 ರಂದು ಕುಂಚೇನಹಳ್ಳಿ ಗ್ರಾಮದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಟಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ 2.17 ಲಕ್ಷ ರೂ. ನಗದು ಹಾಗೂ 7 ದ್ವಿಚಕ್ರ ವಾಹನ ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮೇ 8 ರಂದು ಮಾಚೇನಹಳ್ಳಿಯ ಆಂಜನೇಯ ದೇವಾಲಯದಲ್ಲಿ ಕಳ್ಳತನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 27 ರಂದು ಮೂರು ಜನ ಆರೋಪಿಗಳಾದ ಮಾಚೇನಹಳ್ಳಿ ಮಂಜ, ಜಯಂತಿ ಗ್ರಾಮದ ಚಿನ್ನಪ್ಪ ಮತ್ತು ಮಂಜು ಎಂಬುವರನ್ನು ದಸ್ತಗಿರಿ ಮಾಡಿ ಒಂದು ಕಾಣಿಕೆ ಡಬ್ಬಿ, ಕಳವು ಮಾಡಿದ 1800 ರೂ. ನಗದು ವಶಕ್ಕೆ ಪಡೆಯಲಾಗಿದೆ.
ಜೂನ್ 26 ರಂದು ಬೀರನಕೆರೆ ಗ್ರಾಮದ ಪೂರ್ಯ ನಾಯ್ಕ್ ಅವರ ಬಗರುಹುಕುಂ ಜಮೀನಿನಲ್ಲಿ ಬೆಳೆದ 1 ಕೆಜಿ ಗಾಂಜಾ ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಎಂ. ಶಾಂತರಾಜ್ ಹಾಗೂ ಎಎಸ್ಪಿ ಡಾ. ಶೇಖರ್, ಡಿವೈಎಸ್ಫಿ ಉಮೇಶ್ ಈಶ್ವರ ನಾಯ್ಕ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಸಿಪಿಐ ಸಂಜೀವ್ ಕುಮಾರ್ ನೇತೃತ್ವದಲ್ಲಿ ಪಿಎಸ್ಐ ಗಳಾದ ಸುರೇಶ್ ಮತ್ತು ಡಿ. ಹನುಮಂತಪ್ಪ ಹಾಗೂ ಗ್ರಾಮಾಂತರ ಠಾಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here