ಶಿವಮೊಗ್ಗ : ರೈಲ್ವೇ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಪ್ರಗತಿಗೆ ಅನೇಕ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಕ್ರಿಯವಾಗಿದ್ದು, ಮುಂಬರುವ ದಿನಗಳಲ್ಲಿ ತಜ್ಞರ ಸಲಹೆ ಪಡೆದು ಜಿಲ್ಲೆಯನ್ನು ಆಕರ್ಷಕ ಪ್ರವಾಸಿ ತಾಣವನ್ನಾಗಿಸಲು ಅಗತ್ಯ ಪ್ರಯತ್ನ ಮಾಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರೈಲ್ವೆ ಮತ್ತು ಪ್ರವಾಸಿ ತಾಣಗಳ ಅಭಿವೃದ್ಧಿಗೆ ಈಗಾಗಲೇ ಕೈಗೊಳ್ಳಲಾಗಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಜಿಲ್ಲೆಯ ಆಯ್ದ ನಾಲ್ಕು ಸ್ಥಳಗಳಲ್ಲಿ ರೈಲ್ವೇ ಮೇಲ್ಸೇತುವೆ ಮತ್ತು ಕೆಳಸೇತುವೆಗಳನ್ನು ನಿರ್ಮಿಸಲು ಸ್ಥಳ ಗುರುತಿಸಲಾಗಿದೆ. ವಿಶೇಷವಾಗಿ ನಗರದ ಉಷಾ ನರ್ಸಿಂಗ್ ಹೋಂ ಬಳಿ 60.76 ಕೋಟಿ ವೆಚ್ಚದಲ್ಲಿ, ಭದ್ರಾವತಿ ಸಮೀಪದ ಕಡದಕಟ್ಟೆಯಲ್ಲಿ 25.92ಕೋಟಿ ವೆಚ್ಚದಲ್ಲಿ, ನಗರದ ಕಾಶೀಪುರ ಸಮೀಪ 29.63ಕೋಟಿ ವೆಚ್ಚದಲ್ಲಿ ಹಾಗೂ ವಿದ್ಯಾನಗರದ ರೈಲ್ವೆ ನಿಲ್ದಾಣದ ಹತ್ತಿರ 44.00ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅನುದಾನ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ರಾಜ್ಯದಲ್ಲಿ ಆಯ್ದ 5ಸ್ಥಳಗಳಲ್ಲಿ ರೈಲ್ವೆ ಕೋಚಿಂಗ್ ಮತ್ತು ಟರ್ಮಿನಲ್ ಸೆಂಟರ್ಗಳಿದ್ದು, ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿಯೂ ಟರ್ಮಿನಲ್ ನಿರ್ಮಾಣಗೊಳ್ಳಲಿದ್ದು, ಅದಕ್ಕಾಗಿ 75ಕೋಟಿ ರೂ. ಅನುದಾನ ಮಂಜೂರಾಗಿದೆ. ಈ ಸಂಬಂಧ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಒಂದು ವಾರದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಸೆಪ್ಟಂಬರ್ ಅಂತ್ಯದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲ್ವೆ ಮಾರ್ಗದ ಸರ್ವೇ ಕಾರ್ಯವು 2ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಶಿಕಾರಿಪುರ ಮತ್ತು ಶಿವಮೊಗ್ಗ ಹಾಗೂ ಎರಡನೇ ಹಂತದಲ್ಲಿ ಶಿಕಾರಿಪುರ ಮತ್ತು ರಾಣೆಬೆನ್ನೂರು ಮಾರ್ಗದ ಸರ್ವೇಕಾರ್ಯ ನಡೆಯಲಿದೆ. ಈಗಾಗಲೇ ಮೊದಲ ಹಂತದಲ್ಲಿ ಬರುವ 14ಹಳ್ಳಿಗಳಲ್ಲಿ ಕಂದಾಯ ಮತ್ತು ರೈಲ್ವೆ ಇಲಾಖೆಗಳ ಜಂಟಿ ಸರ್ವೇ ಕಾರ್ಯ ಪೂರ್ಣಗೊಂಡಿದೆ. 8ಗ್ರಾಮಗಳಿಗೆ ಅಂತಿಮ ಹಂತದ ನೋಟೀಫಿಕೇಶನ್ ಕೂಡ ಆಗಿದೆ ಎಂದರು.
ಜಿಲ್ಲೆಯಲ್ಲಿ ಅನೇಕ ಸ್ಥಳಗಳನ್ನು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಲು ಯೋಗ್ಯವಾಗಿವೆ. ಜೋಗ ಜಲಪಾತ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು 150ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇಲ್ಲಿನ 22ಎಕರೆ ಪ್ರದೇಶದಲ್ಲಿ ವೀಕ್ಷಣಾಗೋಪುರ, ಕಾರಂಜಿಗಳ ನಿರ್ಮಾಣ, ವಿಶ್ರಾಂತಿ ಗೃಹಗಳು, ಉದ್ಯಾನ, ವಿದ್ಯುದಾಗಾರಕ್ಕೆ ಪ್ರವಾಸಿಗರಿಗೆ ಅವಕಾಶ ಹಾಗೂ ಮಳೆಗಾಲವನ್ನು ಹೊರತುಪಡಿಸಿ ವರ್ಷ ಪ್ರತಿ ಶನಿವಾರ ಮತ್ತು ಭಾನುವಾರ ಜಲಪಾತಕ್ಕೆ ನೀರು ಹರಿಸಲು ಉದ್ದೇಶಿಸಲಾಗಿದೆ ಎಂದರು.
ಉಡುತಡಿಯ ಅಕ್ಕಮಹಾದೇ ಜನ್ಮಸ್ಥಳವನ್ನು ದೆಹಲಿಯ ಅಕ್ಷರಧಾಮದ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಸಕ್ರೆಬೈಲಿನ ಆನೆಬಿಡಾರವನ್ನು ಸುಮಾರು 25ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದರು.
ನಗರದ ಹೊರಭಾಗದಲ್ಲಿ 34ಕಿ.ಮೀ. ವರ್ತುಲ ರಸ್ತೆ ನಿರ್ಮಾಣಗೊಳ್ಳಲಿದೆ. ಈ ಪೈಕಿ 15ಕಿ.ಮೀ. ರಾಷ್ಟ್ರೀಯ ಹೆದ್ದಾರಿಗೆ ಸೇರಿದೆ. 15ಕಿ.ಮೀ. ಶಿವಮೊಗ್ಗ-ತುಮಕೂರು ಹೆದ್ದಾರಿ ಸೇರಿದೆ. ಚಿತ್ರದುರ್ಗ-ಶಿವಮೊಗ್ಗ ರ್ಟ್ರೋಯ ಹೆದ್ದಾರಿ 560ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿದೆ. ಈ ಕಾಮಗಾರಿಗೆ ರಾಜ್ಯದಿಂದ 100ಕೋಟಿ ರೂ. ಹಾಗೂ ಕೇಂದ್ರದಿಂದ 430ಕೋಟಿ. ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ವಿಮಾನ ನಿಲ್ದಾಣ ಕಾಮಗಾರಿಗೆ 2ನೇ ಹಂತದ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಂಕಿಪಾರ್ಕ್ ಸ್ಥಾಪನೆಗೆ ಸ್ಥಳ ನಿಗದಿಪಡಿಸಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ತಜ್ಞರ ಅಭಿಪ್ರಾಯ ಪಡೆದು, ಯಾರಿಗೂ ತೊಂದರೆಯಾಗದಂತೆ ಮಂಕಿಪಾರ್ಕ್ ಸ್ಥಾಪಿಸಲಾಗುವುದು ಎಂದರು.
ಭದ್ರಾವತಿಯ ಎಂಪಿಎಂ ಹಾಗೂ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಬಿಜೆಪಿ. ಜಿಲ್ಲಾಧ್ಯಕ್ಷ ಡಿ.ಟಿ.ಮೇಘರಾಜ್, ಪ್ರಮುಖರಾದ ಡಿ.ಎಸ್.ಅರುಣ್, ಕೆ.ಎಸ್.ಗುರುಮೂರ್ತಿ, ಜ್ಯೋತಿಪ್ರಕಾಶ್, ದತ್ತಾತ್ರಿ, ಜ್ಞಾನೇಶ್ವರ್, ಮೇಯರ್ ಸುವರ್ಣಶಂಕರ್, ಚನ್ನಬಸಪ್ಪ, ಲಕ್ಷ್ಮೀನಾರಾಯಣ ಕಾಶಿ, ಗಿರೀಶ್ ಪಟೇಲ್ ಮೊದಲಾದವರು ಇದ್ದರು.