ಹೊಸ ದಿಗಂತ ವರದಿ , ಶಿವಮೊಗ್ಗ :
ಜಿಲ್ಲೆಯಲ್ಲಿ ಇದುವರೆಗೆ ಹಕ್ಕಿಜ್ವರದ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಕ್ಕಿಜ್ವರ ಕುರಿತಾಗಿ ಕೈಗೊಳ್ಳಬೇಕಾಗಿರುವ ಮುನ್ನಚ್ಚರಿಕೆ ಕ್ರಮಗಳ ಕುರಿತು ಅಧಿಕಾರಿಗಳ ಸಭೆ ನಡೆಸಿದರು.
ನೆರೆಯ ರಾಜ್ಯದಲ್ಲಿ ಹಕ್ಕಿಜ್ವರದ ಪ್ರಕರಣ ಕಂಡು ಬಂದಿದ್ದರೂ, ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ. ಹಕ್ಕಿಜ್ವರ ಲಕ್ಷಣದ ಬಗ್ಗೆ ನಿಗಾವಹಿಸಲು ಎಲ್ಲಾ ತಾಲೂಕುಗಳಲ್ಲಿ ಅಧಿಕಾರಿಗಳ ತಂಡ ರಚಿಸಲಾಗಿದೆ. ಹಕ್ಕಿಜ್ವರದ ಬಗ್ಗೆ ಸಂದೇಹಾಸ್ಪದ ಪ್ರಕರಣಗಳು ಪತ್ತೆಯಾದರೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಹಕ್ಕಿಗಳು ಸತ್ತಿರುವ ಬಗ್ಗೆ ವರದಿಯಾದರೆ ಈ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಗತ್ಯವಿದ್ದರೆ ಪರಿಶೀಲನೆಗೆ ಪ್ರಯೋಗಾಲಯಕ್ಕೆ ಕಳುಹಿಸಬೇಕು ಎಂದು ಹೇಳಿದರು.
ಸಂಪರ್ಕ ಸಂಖ್ಯೆ: ಹಕ್ಕಿಜ್ವರದ ಬಗ್ಗೆ ಯಾವುದೇ ಸಂಶಯಗಳು ಕಂಡು ಬಂದರೆ ಜಿಲ್ಲಾಮಟ್ಟದ ದೂರವಾಣಿ ಸಂಖ್ಯೆ 08182-255921, 226603 ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಪಶು ವೈದ್ಯಕೀಯ ಸೇವೆ ಉಪನಿರ್ದೇಶಕ ಸದಾಶಿವ ತಿಳಿಸಿದದರು.