ಶಿವಮೊಗ್ಗ: ಬಹುರಾಷ್ಟ್ರೀಯ ಕಂಪನಿಗಳು ಕೃಷಿ ಬಿಟ್ಟು ತೊಲಗುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಜಿಲ್ಲಾ ಘಟಕಗಳಿಂದ ಸೋಮವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿ ಮಾಡಿದ್ದು, ಇದರಿಂದಾಗಿ ಕೃಷಿ ಕ್ಷೇತ್ರದ ಮೇಲೆ ಮಾರಕ ಪರಿಣಾಮವಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ತಿದ್ದುಪಡಿ ಮಾಡಿರುವ ಎಪಿಎಂಸಿ ಕಾಯ್ದೆ. ಭೂಸುಧಾರಣೆ ಕಾಯ್ದೆ, ವಿದ್ಯುತ್ಛಕ್ತಿ ಕಾಯ್ದೆ, ಕಾರ್ಮಿಕ ಕಾಯ್ದೆ, ಬೀಜ ಮಸೂದೆ ಕಾಯ್ದೆಗಳು ಸೇರಿದಂತೆ ಇತರೆ ಕಾಯ್ದೆ ಗಳು ಜನವಿರೋಧಿ ಹಾಗೂ ರೈತ ವಿರೋಧಿಯಾಗಿದ್ದು, ಅವುಗಳನ್ನು ಜಾರಿಗೊಳಿಸಬಾರದು. ಕೃಷಿ ಕ್ಷೇತ್ರ, ರೈತ ಸಮುದಾಯ ಉಳಿಯಲು ಹಾಗೂ ಆಹಾರ ಭದ್ರತೆ ಗಟ್ಟಿಗೊಳಿಸಲು ಈ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಎಚ್.ಆರ್. ಬಸವರಾಜಪ್ಪ, ಶಿವಮೂರ್ತಿ, ಹಿಟ್ಟೂರು ರಾಜು, ಜಾಧವ್ ಮೊದಲಾದವರು ಇದ್ದರು.