ಶಿವಮೊಗ್ಗ: ಬಾಂಬೆಯಿಂದ ತೀರ್ಥಹಳ್ಳಿಗೆ ಬಂದಿದ್ದ ವ್ಯಕ್ತಿಯೊಬ್ಬನಿಗೆ ಕೊರೋನಾ ದೃಢಪಟ್ಟ ಹಿನ್ನೆಲೆ ತಾಲೂಕಿನ ರಂಜದಕಟ್ಟೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ಒಂದೇ ಬಾರಿಗೆ 8 ತಬ್ಲಿಘಿ ಪ್ರಕರಣಗಳು ದೃಢಪಟ್ಟಿದ್ದವು. ಅದರಲ್ಲಿ ಕೋಣಂದೂರಿನ ಒಬ್ಬ ಯುವಕನಿದ್ದ. ನಂತರ 9ನೇ ಪ್ರಕರಣ ರಂಜದಕಟ್ಟೆಯ ಸಮೀಪ ಹಳ್ಳೀಬೈಲಿನಲ್ಲಿ ದಾಖಲಾಗಿದೆ. ಇದರಿಂದ ಶಿವವೊಗ್ಗ ಜಿಲ್ಲೆಗೂ ಬಾಂಬೆ ಲಿಂಕ್ ಶುರುವಾಗಿದೆ.
ಸೋಕಿತನನ್ನು ಶಿವವೊಗ್ಗದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸ್ಥಳಾಂತರಿಸಲಾಗಿದೆ. ಈತ ಬಾಂಬೆಯಿಂದ ಚನ್ನಗಿರಿಗೆ ಖಾಸಗಿ ಆಂಬುಲೆನ್ಸ್ನಲ್ಲಿ ಕಳ್ಳ ಮಾರ್ಗದಲ್ಲಿ ಬಂದು ಚನ್ನಗಿರಿಯಿಂದ ಶಿವವೊಗ್ಗದವರೆಗೆ ನಡೆದುಕೊಂಡು ಬಂದಿದ್ದ ಎನ್ನಲಾಗಿದೆ.
ಶಿವವೊಗ್ಗದಿಂದ ತೀರ್ಥಹಳ್ಳಿ ಗೆ ಕಾರಿನಲ್ಲಿ ಬಂದು ತೀರ್ಥಹಳ್ಳಿಯಿಂದ ತಾಲೂಕು ಕಚೇರಿ ಎದುರಿನ ಆಟೋ ಸ್ಟಾಂಡ್ ನಲ್ಲಿ ತನ್ನ ಗೆಳೆಯ ಆಟೋ ಚಾಲಕನನ್ನು ಕರೆದುಕೊಂಡು ತನ್ನ ಮನೆಗೆ ತಲುಪಿದ್ದ ಎನ್ನಲಾಗಿದೆ.
ಈಗ ಆಟೋ ಚಾಲಕ ಸೇರಿ ಎರಡು ಕುಟುಂಬದ 12 ಮಂದಿಯನ್ನು ಮುನ್ನೆಚ್ಚರಿಕೆಯ ಸಲುವಾಗಿ ಕ್ವಾರೆಂಟೈನ್ ಮಾಡಲಾಗಿದೆ. ಸೋಂಕಿತ ವ್ಯಕ್ತಿ ಪಟ್ಟಣದ ತಾಲೂಕು ಕಚೇರಿ, ಬೇಕರಿ , ಮೆಡಿಕಲ್, ತರಕಾರಿ ಅಂಗಡಿಗಳಿಗೆ ಓಡಾಡಿದ್ದ ಎನ್ನಲಾಗಿದೆ. ಸೋಂಕಿತನನ್ನು ಕರೆದೊಯ್ದ ಆಟೋ ಚಾಲಕ ಸ್ಥಳೀಯ ಮದುವೆ ಮನೆ, ದೇವರ ಹರಕೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ. ಎಲ್ಲರೊಂದಿಗೆ ಸೇರಿ ಕ್ರಿಕೆಟ್ ಆಡಿದ್ದ, ಎಲ್ಲಾ ಕಡೆ ಆಟೋ ಬಾಡಿಗೆ ಮಾಡಿದ್ದ ಎಂದು ತಿಳಿದು ಬಂದಿದೆ.
ಸೋಂಕಿತ ವ್ಯಕ್ತಿಯ ಮನೆಯನ್ನು ಕೇಂದ್ರವಾಗಿಸಿ ಒಂದು ಕಿಮೀ ದೂರು ಬಫರ್ ಜೋನ್ ಎಂದು ಗುರುತಿಸಲಾಗಿದೆ. ರಂಜದಕಟ್ಟೆ ಸುತ್ತುಮುತ್ತಲಿನ ಪ್ರತಿ ಮನೆಯಲ್ಲಿಯೂ ಆರೋಗ್ಯಾಧಿಕಾರಿಗಳಿಂದ ತಪಾಸಣೆ ನಡೆಸಲಾಗುತ್ತಿದೆ