ಶಿವಮೊಗ್ಗ: ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಲು ಹಿಂದೇಟು ಹಾಕುತ್ತಿರುವುದರಿಂದ ಸರ್ಕಾರಿ ಗುತ್ತಿಗೆ ಆಯುಷ್ ವೈದ್ಯರು ಜು. 17 ರಂದುಸಾಮೂಹಿಕ ರಾಜೀನಾಮೆ ನೀಡಿ ಸೇವೆ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಆಯುಷ್ ಫೆಡರೇಶನ್ ಆಫ್ ಇಂಡಿಯಾದ ಜಿಲ್ಲಾ ಶಾಖೆ ಅಧ್ಯಕ್ಷ ಡಾ.ಗುರುರಾಜ ಎಂ.ಬಿ. ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ವೈದ್ಯರು, ಖಾಸಗಿ ಪ್ರಾಕ್ಟೀಸ್ ಮಾಡುತ್ತಿರುವ ಆಯುರ್ವೇದ ವೈದ್ಯರು ಕೂಡ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆಯ ಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
NRHM, NHM, RBSK ಹಾಗು ಅಗೆನೆಸ್ಟ ಪೋಸ್ಟ್ ನ ಸುಮಾರು 2 ಸಾವಿರ ವೈದ್ಯರು ರಾಜೀನಾಮೆ ನೀಡಲಿದ್ದಾರೆ ರಾಜ್ಯದ 20 ಸಾವಿರಕ್ಕೂ ಅಧಿಕ ಖಾಸಗಿ ಆಯುಷ್ ವೈದ್ಯರು ಸೇವೆ ಸ್ಥಗಿತಗೊಳಿಸಲಿದ್ದಾರೆ ಎಂದರು.
ಆಲೋಪಥಿ ವೈದ್ಯರಿಗೆ ಮಾತ್ರ ಸರ್ಕಾರ ವೇತನ ಹೆಚ್ಚಳ ಮಾಡಿದೆ. ಆಯುಷ್ ವೈದ್ಯರು ಕಳೆದ 15-16 ವರ್ಷಗಳಿಂದ ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದರೂ ಕೂಡ ಹೆಚ್ಚಳ ಮಾಡಲಿಲ್ಲ. ಸೇವಾ ಭದ್ರತೆಯನ್ನು ನೀಡಿಲ್ಲ. ಮೇ 25 ರಂದು ವಿಧಾನ ಸೌಧದಲ್ಲಿ ಆರೋಗ್ಯ ಸಚಿವರಿಗೆ ಮನವಿ ನೀಡಲಾಗಿತ್ತು. ಆದರೆ ಅದಕ್ಕೂ ಸ್ಪಂದಿಸಿಲ್ಲ ಎಂದರು.
ತುರ್ತು ಸಂದರ್ಭದಲ್ಲಿ ಆಯುಷ್ ವೈದ್ಯರು ಅಲೋಪತಿ ಔಷಧ ಬರೆಯಲು ಕಾನೂನಿಗೆ ತಿದ್ದುಪಡಿ ಮಾಡುವಂತೆ ಮನವಿ ಮಾಡಿದ್ದರೂ ಕೂಡ ಮಾಡಿಲ್ಲ.ಅನೇಕ ರಾಜ್ಯಗಳಲ್ಲಿ ಇದನ್ನು ತಿದ್ದುಪಡಿ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಅವಕಾಶ ನೀಡುತ್ತಿಲ್ಲ. ಕೊರೊನಾದಂತಹ ಈ ಸಂದರ್ಭದಲ್ಲಿ ಆಯುಷ್ ವೈದ್ಯರ ಸೇವೆ ಅಗತ್ಯವಾಗಿದೆ.ಇದನ್ನು ಮನಗಂಡು ಸರ್ಕಾರ ತಮ್ಮ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.