ಹೊಸ ದಿಗಂತ ವರದಿ ಶಿವಮೊಗ್ಗ
ವೋಟ್ ಬ್ಯಾಂಕ್ ರಾಜಕಾರಣವಾಗಿ ಸರಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಿರುವುದು ಸರಿಯಲ್ಲ. ಇದು ಕನ್ನಡಿಗರಿಗೆ ಮಾಡಿರುವ ದ್ರೋಹವಾಗಿದ್ದು ಇದನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು
ಕನ್ನಡಿಗರ ತೆರಿಗೆ ಹಣವನ್ನು ಮರಾಠಿಗರ ಅಭಿವೃದ್ಧಿಗೆ ಬಳಕೆ ಮಾಡಲು ಮುಂದಾಗಿರುವ ಕ್ರಮ ಖಂಡನೀಯ.ಮಹಾರಾಷ್ಟ್ರ ಹಾಗು ಕರ್ನಾಟಕ ಗಡಿ ಸಮಸ್ಯೆ ನ್ಯಾಯಾಲಯದಲ್ಲಿದೆ. ಅದನ್ನು ಪರಿಗಣಿಸದೆ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಲಾಗಿದೆ. ಮರಾಠಿಗರಿಗೆ ರಾಜ್ಯ ಸರಕಾರ ದೀಪಾವಳಿ ಕೊಡುಗೆ ನೀಡಿರುವುದನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದ್ದಾರೆ.
ಇತಿಹಾಸ ಪ್ರಸಿದ್ಧ ಸಿಗಂದೂರು ದೇವಸ್ಥಾನವನ್ನು ಈ ಹಿಂದಿನಿಂದಲೂ ಧರ್ಮದರ್ಶಿ ರಾಮಪ್ಪನವರ ಕುಟುಂಬ ಮುನ್ನಡೆಸಿಕೊಂಡು ಬಂದಿದ್ದು, ಅವರ ನೇತೃತ್ವದಲ್ಲಿ ಹೆಚ್ಚಿನ ಪ್ರಗತಿಯಾಗಿದೆ. ಭಕ್ತರ ಆಕರ್ಷಣೆಯ ಕೇಂದ್ರವೂ ಆಗಿದೆ. ಆದರೆ ಈಗ ಸರ್ಕಾರ ನೇಮಕ ಮಾಡಿರುವ ಮೇಲು ಉಸ್ತುವಾರಿ ಹಾಗೂ ಸಲಹಾ ಸಮಿತಿ ನೇಮಕ ಮಾಡಿರುವುದನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ.
ಈ ಹಿಂದೆ ಇದ್ದಂತೆ ಧರ್ಮದರ್ಶಿ ರಾಮಪ್ಪನವರಿಗೆ ದೇವಸ್ಥಾನದ ಜವಾಬ್ದಾರಿ ನೀಡಬೇಕು. ಧಾರ್ಮಿಕ ಕೇಂದ್ರವನ್ನಾಗಿ ಅಭಿವೃದ್ದಿಪಡಿಸಿರುವ ಅವರಿಂದ ದೇವಸ್ಥಾನವನ್ನು ಸರಕಾರ ಯಾವುದೇ ಕಾರಣಕ್ಕೂ ವಾಪಸ್ ಪಡೆಯದಂತೆ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಶಿವಣ್ಣ ಸೂಡೂರು, ರಂಜಿತ್, ಅರುಣ್ ಬೆಂಕಿ, ಪ್ರವೀಣ್ ಅಡ್ಡೇರಿ, ಪ್ರಕಾಶ್, ಮಹೇಶ್, ಮಂಜುನಾಥ ಮತ್ತಿತರರು ಇದ್ದರು.