ಹೊಸ ದಿಗಂತ ವರದಿ ಶಿವಮೊಗ್ಗ:
ರಾಜ್ಯದಲ್ಲಿ ನೂತನವಾಗಿ ರಚನೆ ಮಾಡಿರುವ ಮರಾಠ ಹಾಗೂ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮಗಳನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ ಎಲ್ಲಾ ಸಮುದಾಯಗಳಿಗೂ ಒಂದೊಂದು ನಿಗಮಗಳನ್ನು ಸ್ಥಾಪಿಸುವಂತೆ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಟ್ರಸ್ಟಿ ಕಲ್ಲೂರು ಮೇಘರಾಜ್ ಒತ್ತಾಯಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿಗೊಂದು ಅಭಿವೃದ್ಧಿ ನಿಗಮ ಹಾಗೂ ಅನ್ಯ ಭಾಷಿಗರಿಗೂ ಅಭಿವೃದ್ಧಿ ನಿಗಮ ಮಾಡುವ ಮೂಲಕ ಅನಗತ್ಯ ಹೊರೆ ಆರ್ಥಿಕ ಹೊರೆ ಮಾಡಲಾಗುತ್ತಿದೆ. ನಿಗಮಗಳಿಂದ ಆದಾಯವಿಲ್ಲ. ವೆಚ್ಚವೇ ಜಾಸ್ತಿ ಎಂಬುದು ಗೊತ್ತಿದ್ದರೂ ಕೂಡ ಸರ್ಕಾರ ಗಂಭೀರ ಚಿಂತನೆ ಮಾರುತ್ತಿಲ್ಲ ಎಂದರು.
ಮುಸ್ಲಿಂ, ಒಕ್ಕಲಿಗ, ಜೈನರು, ತೆಲಗು, ತಮಿಳು, ತಿಗಳ, ಕುರುಬ, ಕುಣಬಿ, ಕೊಡವ, ಭಂಟ್ಸ್, ಸಾಧುಶೆಟ್ಟಿ ಹೀಗೆ ಎಲ್ಲಾ ಭಾಷಿಗರಿಗೂ ಒಂದೊಂದು ನಿಗಮ ಮಾಡಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದ ಅವರು, ಆ ರೀತಿ ಮಾಡಲು ಸಾಧ್ಯವಿದ್ದರೆ ಮಾಡಲಿ ಎಂದು ಹೇಳಿದರು.
ಮಹಾರಾಷ್ಟ್ರ ರಾಜ್ಯ ಅಕ್ರಮಿಸಿಕೊಂಡಿರುವ ಕೊಲ್ಲಾಪುರ, ಸಾಂಗ್ಲಿ, ಸೊಲ್ಲಾಪುರ, ಲಾತೂರು, ನಾದಿರ್ ಪ್ರದೇಶವನ್ನು ಕರ್ನಾಟಕ್ಕೆ ಸೇರಿಸಬೇಕು. ಕೇರಳ ಅಕ್ರಮಿಸಿಕೊಂಡಿರುವ ಕಾಸರಗೋಡನ್ನು ಕೂಡ ರಾಜ್ಯಕ್ಕೆ ಸೇರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸದೆ ಕೆಲವೇ ಜಾತಿ ಹಾಗೂ ಭಾಷಿಗರಿಗೆ ನಿಗಮ ಮಾಡಿದರೆ ಎಲ್ಲಾ ಸಮುದಾಯಗಳು ಕೂಡ ಬೀದಿಗಿಳಿದು ಹೋರಾಟ ಮಾಡುವ ಕಾಲ ದೂರವಿಲ್ಲ ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂ. ಮಾತ್ರ ಅನುದಾನ ಮೀಡುವ ಸರ್ಕಾರ ಮರಾಠ ನಿಗಮಕ್ಕೆ 50 ಕೋಟಿ ರೂ. ನೀಡಿರುವುದು ಇದ್ಯಾವ ನ್ಯಾಯ. ಭಾಷಿಗರ ನಡುವೆ ಸರ್ಕಾರರವೇ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ದೂರಿದರು.
ನಿಗಮಗಳ ಸ್ಥಾಪನೆ ಬದಲಾಗಿ ಕೊರೊನಾ ಪೀಡಿತರಿಗೆ ಉತ್ತಮ ಚಿಕಿತ್ಸೆ ನೀಡಲು, ಅತಿವೃಷ್ಟಿಯಿಂದ ಹಾನಿಗೀಡಾದವರಿಗೆ ಸಮರ್ಪಕ ಪುನರ್ವಸತಿ ಕಲ್ಪಿಸಲು ಮುಂದಾಗಲಿ.