ಶಿವಮೊಗ್ಗ: ಮಹಾತ್ಮಗಾಂಧಿ ನಗರೋತ್ಥಾನ ಯೋಜನೆ ಮೂಲಕ 125 ಕೋಟಿ ರೂ. ನಗರ ಪಾಲಿಕೆಗೆ ರಾಜ್ಯ ಸರಕಾರ ನೀಡಿದ್ದು, ಇದರಿಂದ ನಗರದ ಇನಷ್ಟು ಅಭಿವೃದ್ಧಿಗೆ ಸಹಾಯವಾಗಲಿದೆ ಎಂದು ನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎಸ್.ಚನ್ನಬಸಪ್ಪ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪನವರು ವಿಶೇಷ ಕಾಳಜಿಯಿಂದ ರಾಜ್ಯದ ವಿವಿಧ ನಗರಗಳಿಗೆ ಅನುದಾನ ನೀಡಿದ್ದಾರೆ. ಶಿವಮೊಗ್ಗ ನಗರಕ್ಕೂ ಕೂಡ ಅನುದಾನ ನೀಡಿದ್ದಾರೆ ಎಂದರು.
ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ 1550 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಿಂದ ಹೊರತು ಪಡಿಸಿ ಈ ಅನುದಾನ ಬಿಡುಗಡೆ ಮಾಡಲಾಗಿದೆ. ಪಾರ್ಕ್, ರಸ್ತೆ, ಕುಡಿಯುವ ನೀರು, ಸೇರಿದಂತೆ ಮೂಲ ಸೌಕರ್ಯದ ವ್ಯವಸ್ಥೆಯನ್ನ ನಗರೋತ್ಥಾನದಲ್ಲಿ ಒತ್ತುನೀಡಲಾಗಿದೆ. ಪಾಲಿಕೆಯ 29 ಅಭಿವೃದ್ಧಿ ಕಾಮಗಾರಿ ಅನುದಾನಕ್ಕೆ ಕೊರತೆಯಿಂದ ಹಣ ಸ್ಥಗಿತಗೊಂಡಿತ್ತು. ಅದೆಲ್ಲದಕ್ಕೂ ಸಿಎಂ ಅನುದಾನ ನೀಡಿದ್ದಾರೆ ಎಂದರು.
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ 14 ಇಲಾಖೆಯಿಂದ 130 ಕೋಟಿ ವೆಚ್ಚದಲ್ಲಿ ನಗರ ವ್ಯಾಪ್ತಿಯ 85 ಶಾಲೆಗಳ ಅಭಿವೃದ್ಧಿಗೆ ಅನುದಾನವನ್ನು ತಂದಿದ್ದಾರೆ. ಸರ್ಕಾರಿ ಶಾಲೆಗಳ ದುರಸ್ತಿ ಮತ್ತು ಅಭಿವೃದ್ಧಿಗೆ ಇದರಿಂದ ಹೆಚ್ಚಿನ ಅನುಕೂಲವಾಗಿದೆ. ಇದರಿಂದ ಸರಕಾರಿ ಶಾಲೆಗಳು ವಿದ್ಯಾರ್ಥಿ ಹಾಗೂ ಪೋಷಕರ ಗಮನ ಸೆಳೆಯುವಂತಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋಧ್ಯಮ ಇಲಾಖೆ ಸೇರಿದಂತೆ 14 ಇಲಾಖೆಗಳಿಂದ ಹಣ ಕೊಡಿಸಿರುವ ಕೆ.ಎಸ್.ಈಶ್ವರಪ್ಪ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ವರ್ತುಲ ರಸ್ತೆ ಸಂಬಂಧಪಟ್ಟಂತೆ NH ಕಚೇರಿಯನ್ನೇ ಶಿವಮೊಗ್ಗದಲ್ಲಿ ಆರಂಭಿಸಿದರು. ರಿಂಗ್ ರಸ್ತೆ, ವಿಮಾನ ನಿಲ್ದಾಣ, ಚತುಷ್ಪಥ ರಸ್ತೆ, 9.25 ಕೋಟಿ ವೆಚ್ಚದಲ್ಲಿ 27 ಕಾಮಗಾರಿ, 30.30 ಕೋಟಿಯಲ್ಲಿ 28 ಸಮುದಾಯ ಭವನ, ಮೂರು ರೈಲ್ವೆ ಮೇಲು ಸೇತುವೆ ಆರಂಭಿಸಿದ ಕೀರ್ತಿ ಸಂಸದರಿಗೆ ಸಲ್ಲುತ್ತದೆ ಎಂದರು.
ನಾನು ನಗರ ಸಭೆ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಬರುತ್ತಿದ್ದ ಅನುದಾನಕ್ಕೂ ಈಗ ಬರುತ್ತಿರುವ ಅನುದಾನಕ್ಕೂ ವ್ಯತ್ಯಾಸವಿದೆ. ಬಿಜೆಪಿ ನೇತೃತ್ಚದ ರಾಜ್ಯ ಸರಕಾರ ಸಾಕಷ್ಟು ಅನುದಾನ ನೀಡಿದೆ ಎಂದರು.
ಜಿಲ್ಲೆ ಮಾತ್ರವಲ್ಲ ರಾಜ್ಯದಲ್ಲಿ ಅಭಿವೃದ್ಧಿಯ ಶಕೆ ಮುಖ್ಯಮಂತ್ರಿ ಯಡಿಯೂರಪ್ಪರಿಂದ ಆರಂಭವಾಗಿದೆ. ನೆರೆ, ಕೊರೋನದಂತಹ ಸಂದಿಗ್ದ ಸಂದರ್ಭದಲ್ಲಿಯೂ ಅನುದಾನ ನೀಡುತ್ತಿರುವುದು ಸರಕಾರದ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಜಗದೀಶ್, ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರುಳೀಧರ್, ಸುನೀತಾ ಅಣ್ಣಪ್ಪ, ಅನಿತಾ ರವಿಶಂಕರ್, ಧೀರಾಜ್ ಹೊನ್ನವಿಲೆ ಸಂತೋಷ್ ಬಳ್ಳೇಕೆರೆ, ಮೋಹನ್ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.