ಶಿವಮೊಗ್ಗ: ಕರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಸಲುವಾಗಿ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಇಂದು 500 ಕುಟುಂಬಗಳಿಗೆ ಆಹಾರ ಕಿಟ್ ಗಳನ್ನು ನಗರದ ಬಸವ ಕೇಂದ್ರದಲ್ಲಿ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಡೀ ವಿಶ್ವವನ್ನೇ ಕಾಡುತ್ತಿರುವ ಕರೋನಾ ವೈರಸ್ ನಿಯಂತ್ರಣಕ್ಕಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹಗಲಿರುಳು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅವರ ಸಮಯೋಚಿತ ನಿರ್ಧಾರದ ಫಲವಾಗಿ ರಾಜ್ಯ ಉತ್ತಮ ಸ್ಥಿತಿಯಲ್ಲಿದೆ ಎಂದರು.
ವಿಧಾನ ಸಭೆಯಿಂದ ವಿಧಾನ ಪರಿಷತ್ ಶಾಸಕನಾಗಿ ಆಯ್ಕೆಯಾಗಿರುವ ನನಗೆ ರಾಜ್ಯದ ವಿವಿದೆಡೆಗಳಿಂದ ಸಹಾಯ ಕೋರಿ ಮನವಿಗಳು ನಿರಂತರವಾಗಿ ಬರುತ್ತಿದೆ. ಈಗಾಗಲೇ ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್ -19 ಖಾತೆಗೆ 26 ಲಕ್ಷ ರೂ.ಗಳನ್ನು ದೇಣಿಗೆ ನೀಡಿದ್ದೇನೆ ಎಂದರು. ಇಂದಿನ ಆಹಾರ ಕಿಟ್ ನಲ್ಲಿ ಅಡುಗೆ ಎಣ್ಣೆ, ಅಕ್ಕಿ, ಕಡ್ಲೇಕಾಳು, ರವೆ, ಹುರುಳಿ ಕಾಳು, ತೊಗರಿಬೇಳೆ, ಅವಲಕ್ಕಿ, ಸಕ್ಕರೆ, ಬಟ್ಟೆ ಸೋಪು, ಸ್ನಾನದ ಸೋಪು, ಸಾಂಬಾರ್ ಪುಡಿ, ಉಪ್ಪು ಒಳಗೊಂಡಿದೆ ಎಂದರು.
ಬಸವಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಹಾನಗರ ಪಾಲಿಕೆ ಸದಸ್ಯೆ ಅನಿತಾ ರವಿಶಂಕರ್, ಕೇಬಲ್ ನಾಗರಾಜ್, ಬಳ್ಳೇಕೆರೆ ಸಂತೋಷ್ ಇತರರು ಉಪಸ್ಥಿತರಿದ್ದರು.