ಶಿವಮೊಗ್ಗ : ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದಿಂದ ನೀಡಲಾಗಿರುವ ಸುಮಾರು 86 ಕೋಟಿ ರೂ. ಸಾಲವನ್ನು ಸರ್ಕಾರ ಮನ್ನಾ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಹಾಗೂ ವಿಶ್ವಕರ್ಮ ಮಹಸಭಾ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಮನವಿ ಮಾಡಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತೀ ಫಲಾನುಭವಿಗೆ 50 ಸಾವಿರ ದಿಂದ 2 ಲಕ್ಷ ರೂ.ವರೆಗೆ ನೀಡಲಾಗಿದೆ. ಈ ಎಲ್ಲಾ ಫಲಾನುಭವಿಗಳು ಕೈ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಈಗ ಕೊರೊನಾ ಸಂಕಷ್ಟದಿಂದಾಗಿ ದುಡಿಮೆ ಇಲ್ಲದೆ ಸಾಲ ಮರುಪಾವತಿ ಕಷ್ಟವಾಗಿದೆ ಎಂದರು.
ಕೊರೋನ ಹಿನ್ನೆಲೆಯಲ್ಲಿ ಸರ್ಕಾರ ನೇಕಾರ, ಮೀನುಗಾರರ ಹಾಗೂ ಇತರೆ ಕಸಬುದಾರರಿಗೆ ನೆಎವು ನೀಡಿದೆ. ಕೇಂದ್ರ ಸರ್ಕಾರದ ಪ್ಯಾಕೇಜ್ ಕೂಡ ಲಭ್ಯವಾಗಿದೆ. ಅದರೆ ವಿಶ್ವಕರ್ಮ ಸಮುದಾಯಕ್ಕೆ ಯಾವುದೇ ಸೌಲಭ್ಯ ಸಿಕ್ಕಿಲ್ಲ ಎಂದರು.
ನಿಗಮಕ್ಕೆ ಸರ್ಕಾರ ನೀಡುತ್ತಿರುವ ಅನುದಾನ ಕೂಡ ತುಂಬಾ ಕಡಿಮೆ ಇದೆ. ವಿವಿಧ ಸೌಲಭ್ಯ ಪಡೆಯುವ ಸಲುವಾಗಿ 1.6 ಲಕ್ಷ ಅರ್ಜಿಗಳು ಬಂದಿದ್ದು, ಅನುದಾನ ಕಡಿಮೆ ಇರುವುದರಿಂದ ಇವೆಲ್ಲಾ ಬಾಕಿ ಉಳಿದಿವೆ. ಹೀಗಾಗಿ ನಿಗಮಕ್ಕೆ ಕನಿಷ್ಠ 250 ರಿಂದ 300 ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಲಾಗುತ್ತದೆ ಎಂದರು.
ರಾಜ್ಯದಲ್ಲಿ ಸುಮಾರು 45 ಲಕ್ಷ ಜನಸಂಖ್ಯೆ ಇದ್ದರೂ ಕೂಡ ಒಬ್ಬ ಶಾಸಕರು ನೇರವಾಗಿ ಆಯ್ಕೆ ಅಗಿಲ್ಲ. ಇದರಿಂದಾಗಿ ಕನಿಷ್ಠ ನಾಲ್ಕು ಎಂಎಲ್ ಸಿಗಳನ್ನು ನೇಮಕ ಮಾಡುವಂತೆ ಒತ್ತಾಯಿಸಿದರು.
ಹಿಂದುಳಿದ ವರ್ಗಗಳಲ್ಲಿ 103 ಜಾತಿಗಳಿದ್ದು, ಇವುಗಳಲ್ಲಿ 10 – 15 ಸಾವಿರ ಜನಸಂಖ್ಯೆ ಹೊಂದಿರುವ ಸಮುದಾಯಗಳಿವೆ. ಅವುಗಳಿಗೆ ರಾಜಕೀಯ ಮತ್ತು ಆರ್ಥಿಕ ಶಕ್ತಿಯೂ ಇಲ್ಲ. ಅಂತಹ ಸಮುದಾಯಗಳಿಗೆ ಸಿ ಎಂ ಯಡಿಯೂರಪ್ಪನವರು ಸೌಲಭ್ಯ ನೀಡುವ ಭರವಸೆ ಇದೆ ಎಂದರು.
ಯಾವ ಹಿಂದುಳಿದ ಸಮುದಾಯ ಎಷ್ಟು ಜನ ಸಂಖ್ಯೆ ಹೊಂದಿದೆ ಎಂಬುದರ ಬಗ್ಗೆ ನಿಖರ ಅಂಶವಿಲ್ಲ. ಅದನ್ನು ತಿಳಿಯಲು ಹಾಗೂ ನಿಖರವಾದ ಸೌಲಭ್ಯಗಳನ್ನು ಒದಗಿಸಲು ಹಿಂದುಳಿದ ವರ್ಗಗಳ ಆಯೋಗ ನೀಡದ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ಎಸ್. ರಾಮು, ಸೀತಾಲಕ್ಷ್ಮಿ, ಪ್ರದೀಪ್ ಕುಮಾರ್, ಧನಂಜಯಕುಮಾರ್ ಮೊದಲಾದವರು ಇದ್ದರು.