Monday, August 15, 2022

Latest Posts

ಶಿವಮೊಗ್ಗ| ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧ ಮಾಜಿ ಶಾಸಕ ಮಧು ಬಂಗಾರಪ್ಪ ಗರಂ

ಶಿವಮೊಗ್ಗ: ಸೊರಬ ಪಟ್ಟಣದ ಸರ್ವೆ ನಂ 113ರಲ್ಲಿ ವಾಸಿಸುತ್ತಿರುವ ಬಡ ಜನರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿರುವ ಶಾಸಕ ಕುಮಾರ್ ಬಂಗಾರಪ್ಪ ಅವರ ನಡೆ ಅಕ್ಷಮ್ಯವಾಗಿದ್ದು, ಜನತೆ ಪಕ್ಷಾತೀತವಾಗಿ ಹೋರಾಟದ ಮೂಲಕವೇ ತಕ್ಕ ಉತ್ತರ ನೀಡಬೇಕು ಎಂದು ಮಾಜಿ ಶಾಸಕ ಮಧುಬಂಗಾರಪ್ಪ ಕರೆ ನೀಡಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕಾನಕೇರಿಯ ಸರ್ವೆ 113ರಲ್ಲಿ ವಾಸಿಸುತ್ತಿರುವವರು 94ಸಿಸಿ ಕಾಯ್ದೆಯಡಿ ಅರ್ಜಿಸಲ್ಲಿಸಿದ್ದಾರೆ. ನಾನು ಮತ್ತು ನನ್ನ ಹಿಂದಿನ ಶಾಸಕರು ಅಧಿಕಾರದಲ್ಲಿದ್ದಾಗ ಅಧಿಕಾರಿಗಳಿಂದ ಅರ್ಜಿಗಳನ್ನು ಪರಿಶೀಲಿಸಿ ಕಾನೂನು ಬದ್ಧವಾಗಿ ಅರ್ಹರಿಗೆ ಹಕ್ಕು ಪತ್ರಗಳನ್ನು ವಿತರಿಸಿದ್ದೆವು. ಕಾನೂನಿನ ಅರಿವೇ ಇಲ್ಲದ ಶಾಸಕರು ನಿವಾಸಿಗಳ ಮನೆ ಮತ್ತು ನಿವೇಶನಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ನಿವಾಸಿಗಳಿಗೂ ಸಮಸ್ಯೆ ಸೃಷ್ಟಿಸುವ ಸಾಧ್ಯತೆಗಳು ಎದ್ದು ಕಾಣುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಪಕ್ಷಾತೀತವಾಗಿ ಹೋರಾಟ ನಡೆಸುವ ಅವಶ್ಯಕತೆ ಇದೆ. ಜನತೆ ಆತಂಕ ಪಡುವ ಅಗತ್ಯ ಇಲ್ಲ ನಾನು ಸದಾ ನಿಮ್ಮೊಂದಿಗೆ ಇದ್ದೇನೆ ಎಂದು ಭರವಸೆ ನೀಡಿದರು.
ಲಾಕ್‍ಡೌನ್‍ನಂತಹ ಸಂದರ್ಭದಲ್ಲಿ ನ್ಯಾಯಾಲಯಗಳು ಬಂದ್ ಆಗಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಬಡವರಿಗೆ ಗಾಯದ ಮೇಲೆ ಬರೆ ಎಳೆದಂತೆ ನಿವೇಶನಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ದುರಾಹಂಕಾರ ಪ್ರದರ್ಶಿಸುತ್ತಿರುವುದು ಜನಪ್ರತಿನಿಧಿಗೆ ಶೋಭೆ ತರುವುದಿಲ್ಲ. ದ್ವೇಶದ ರಾಜಕಾರಣ ಮಾಡುತ್ತಾ ಬಡವರಿಗೆ ಸಮಸ್ಯೆಯನ್ನುಂಟು ಮಾಡುವುದೇ ಶಾಸಕರ ಕಾಯಕವಾಗಿದೆ. ಕೇವಲ ಎರಡು ವರ್ಷದಲ್ಲಿ ತಾಲ್ಲೂಕು 9 ಮಂದಿ ತಹಶೀಲ್ದಾರರನ್ನು ಕಂಡಿದೆ. ಅಧಿಕಾರಿಗಳು ಕಾರ್ಯನಿರ್ವಹಿಸುವುದೇ ಕಷ್ಟದ ಸ್ಥಿತಿ ನಿಮಾಣವಾಗಿದ್ದು, ವರ್ಗಾವಣೆ ಬಯಸುತ್ತಿದ್ದಾರೆ ಎಂದರು.
ನಾನು ಸದಾ ನಾಯಕನೇ..
ನಾನು ಚುನಾವಣೆಯಲ್ಲಿ ಸೋಲುಂಡಿರುಬಹುದು. ಆದರೆ, ಸದಾ ನಾನು ನಾಯಕನೇ. ನಿಮ್ಮ ಸಂಕಷ್ಟಗಳಿಗೆ ಜೊತೆಗಿದ್ದು, ಹೋರಾಟಕ್ಕೆ ಬೆಂಬಲ ನೀಡುತ್ತೇನೆ. ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿದ್ದರೆ ಇಂದು ಸಮಸ್ಯೆಗಳು ಬಿಗಡಾಯಿಸುತ್ತಿರಲಿಲ್ಲ. ಕಾಗೋಡು ತಿಮ್ಮಪ್ಪ ಅವರ ಪರಿಶ್ರಮದಿಂದ ಪಟ್ಟಣದ ಸರ್ಕಾರಿ ಜಾಗದಲ್ಲಿ ಅಕ್ರಮ ಮನೆಗಳನ್ನು ಸಕ್ರಮಗೊಳಿಸಲು 94ಸಿಸಿ ಕಾಯ್ದೆಯನ್ನು ಜಾರಿಗೆ ತಂದರು. ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ ತೃಪ್ತಿ ನನಗೆ ಇದೆ. ಬಿಡಿಎ ನಿವೇಶನಗಳಲ್ಲಿ ಅಕ್ರಮವಾಗಿ ವಾಸಿಸುತ್ತಿರುವವರಿಗೆ ಸಕ್ರಮಗೊಳಿಸಲು ಸರ್ಕಾರವೇ ತೀರ್ಮಾನಿಸಿದೆ. ಆಡಳಿತ ರೂಢಪಕ್ಷದ ಶಾಸಕರು ಕಾನೂನಿನ ಅರಿವಿಲ್ಲದಂತೆ ವರ್ತಿಸುತ್ತಿರುವುದು ತಾಲ್ಲೂಕಿನ ದುರ್ಧೈವ ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ, ಎಪಿಎಂಸಿ ಸದಸ್ಯರಾದ ರಾಜು ಕುಪ್ಪಗಡ್ಡೆ, ಶಾಂತಮ್ಮ ಉಳವಿ, ಜೆ. ಪ್ರಕಾಶ್, ಜಯಶೀಲ ಗೌಡ, ತಾಪಂ ಸದಸ್ಯ ನಾಗರಾಜ ಚಂದ್ರಗುತ್ತಿ, ಪಪಂ ಸದಸ್ಯೆ ಪ್ರೇಮಾ ಟೋಕಪ್ಪ, ಪ್ರಮುಖರಾದ ಎಂ.ಡಿ. ಶೇಖರ್, ಸಂಜೀವ ಲಕ್ಕವಳ್ಳಿ, ಪ್ರಶಾಂತ್ ಮೇಸ್ತ್ರಿ, ಸುರೇಶ್ ಬಿಳವಾಣಿ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss