ಶಿವಮೊಗ್ಗ: ದೇಶದ ಜಿಡಿಪಿಯ ಶೇ.10 ರಷ್ಟು ಪರಿಹಾರ ಪ್ಯಾಕೇಜ್ ಘೋಷಿಸುವ ಮೂಲಕ ಪ್ರಧಾನಿ ಮೋದಿಯವರು ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡಿದ್ದಾರೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕರೊನಾ ಸವಾಲಾಗಿತ್ತು. ಪ್ರತಿ ಜೀವ ಉಳಿಸಿಕೊಳ್ಳುವ ಹಠದಿಂದ ಪ್ರಧಾನಿ ಮೋದಿ ಕ್ಷಣ ಕ್ಷಣವೂ ಕೆಲಸ ಮಾಡಿದ್ದಾರೆ. ಹೀಗಾಗಿಯೇ ಆರ್ಥಿಕ ಚೇತನ ನೀಡುವ ಸಲುವಾಗಿ ಗರಿಷ್ಠ ಪ್ಯಾಕೇಜ್ ನೀಡಿದ್ದಾರೆ ಎಂದರು.
ವಿಶ್ವದ ಅಭಿವೃದ್ಧಿ ಹೊಂದಿದ ಅನೇಕ ದೇಶಗಳು ಆರ್ಥಿಕ ವಾಗಿ ತತ್ತರಿಸಿದ್ದರೂ ನಮ್ಮ ದೇಶ ಉತ್ತಮ ಸ್ಥಿತಿಯಲ್ಲಿದೆ. ಆರ್ಥಿಕ ಯದ್ಧದ ಸಂದರ್ಭದಲ್ಲಿ, ಕೈಗಾರಿಕಾ ಸವಾಲು ಹಲವು ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವಂತಹ ಕೆಲಸ ಮೋದಿಯವರಿಂದ ಆಗುತ್ತಿದೆ. ಸ್ವಾವಲಂಬನೆ ಭಾರತಕ್ಕೆ ಅಡಿಪಾಯ ಹಾಕಿದ್ದಾರೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆ, ಗುತ್ತಿಗೆದಾರರು ಸೇರಿದಂತೆ ಅನೇಕರಿಗೆ ಅನುಕೂಲವಾಗಿದೆ. ಕೃಷಿಕರು, ರಸ್ತೆ ಬದಿ ವ್ಯಾಪಾರಿಗಳು, ಮಧ್ಯಮ ವರ್ಗದವರಿಗೆ ಪ್ರಯೋಜನವಾಗಲಿದೆ ಎಂದರು.
ರಾಜ್ಯ ಸರ್ಕಾರ ಕೂಡ ಉತ್ತಮ ವಾಗಿ ನಿರ್ವಹಣೆ ಮಾಡುತ್ತಿದೆ. ರೈತರು, ಬಡವರು, ಮಧ್ಯಮ ವರ್ಗಕ್ಕೆ ಅನುಕೂಲವಾಗುವ ಯೋಜನೆಗಳನ್ನು ಪ್ರಕಟಿಸಿದೆ ಎಂದ ಅವರು, ನಗರದ ರಿಂಗ್ ರಸ್ತೆ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸುವುದಾಗಿ ಹೇಳಿದರು.