ಶಿವಮೊಗ್ಗ : ಉತ್ತರಪ್ರದೇಶದ ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಮಾನವ ಹಕ್ಕುಗಳ ಕಮಿಟಿ, ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಉತ್ತರ ಪ್ರದೇಶದ ರಾಜ್ಯಪಾಲರಿಗೆ ಹಾಗೂ ರಾಷ್ಟ್ರಪತಿಗಳಿಗೆ ಗುರುವಾರ ಮನವಿ ಸಲ್ಲಿಸಿತು.
ಸೆಪ್ಟೆಂಬರ್ 14 ರಂದು ಉತ್ತರಪ್ರದೇಶದ ಹತ್ರಾಸ್ ನಲ್ಲಿ 18 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಅಮಾನವೀಯವಾಗಿದೆ ಎಂದು ಮನವಿಯಲ್ಲಿ ಹೇಳಿದ್ದಾರೆ.
ದೆಹಲಿ ಅತ್ಯಾಚಾರ ಪ್ರಕರಣ ಹೈದರಾಬಾದ್ ಅತ್ಯಾಚಾರ ಪ್ರಕರಣ ಹೀಗೆ ಅತ್ಯಾಚಾರಗಳಿಗೆ ಕೊನೆಯೇ ಇಲ್ಲದಂತೆ ಆಗಿದೆ. ಅದರಲ್ಲೂ ಉತ್ತರ ಪ್ರದೇಶದ ಪ್ರಕರಣವು ತೀವ್ರ ರಾಕ್ಷಸ ಪ್ರವೃತ್ತಿಯಂತೆ ಕಾಣುತ್ತಿದ್ದು, ಮನುಕುಲಕ್ಕೆ ತೀವ್ರ ಕಂಟಕವಾಗಿದೆ ಎಂದಿದ್ದಾರೆ.
ಈ ಪ್ರಕರಣದಲ್ಲಿ ಬಂಧಿತರಾಗಿರುವ ನಾಲ್ವರು ಆರೋಪಿಗಳಿಗೆ ಕಾನೂನಿನ ರೀತಿಯಲ್ಲಿ ಕಠಿಣ ಶಿಕ್ಷೆ ನೀಡಿ ಹಾಗೂ ದೇಶದಲ್ಲಿ ಇಂಥ ಪ್ರಕರಣಗಳು ಮತ್ತೆ ಮರುಕಳಿಸದಂತೆ ಸರಕಾರಗಳು ಬಲವಾದ ಕಾನೂನು ಹಾಗೂ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಕಮಿಟಿ ಆಗ್ರಹಿಸಿದೆ.
ತನಿಖೆಯ ಭರವಸೆ ನೀಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತನಿಖೆಗೆ ಎಸ್ ಐ ಟಿ ರಚಿಸಲು ಮುಂದಾಗಿರುವುದು ಶ್ಲಾಘನೀಯ. ಹಾಗೆಯೇ ಆದಷ್ಟು ಬೇಗ ತನಿಖೆ ಮುಗಿಸಿ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕಿದೆ.
ತನಿಖೆ ನಡೆಯದಿದ್ದರೆ ಮುಂದಿನ ದಿನಗಳಲ್ಲಿ ಜನರೇ ಆರೋಪಿಗಳನ್ನು ಸೆದೆಬಡಿಯುವ ಕಾಲ ಬರುತ್ತದೆ. ಯಾವುದೇ ಸರ್ಕಾರಗಳು ಅಂತಹ ಉಗ್ರವಾದಕ್ಕೆ ಅವಕಾಶ ನೀಡದೇ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ವಿನಂತಿಸುತ್ತದೆ.