Thursday, July 7, 2022

Latest Posts

ಶಿವಮೊಗ್ಗ| ಹಿಂದುಸಂಘಟನಾ ಮಹಾಮಂಡಳಿ ಗಣಪತಿ ನಾಳೆಯೇ ವಿಸರ್ಜನೆ

ಶಿವಮೊಗ್ಗ: ನಗರದ ಪ್ರತಿಷ್ಠಿತ ಹಿಂದುಸಂಘಟನಾ ಮಹಾಮಂಡಳಿ ಗಣಪತಿಯನ್ನು ನಾಳೆ ಪ್ರತಿಷ್ಠಾಪನೆ ಮಾಡಿ, ನಾಳೆಯೇ ವಿಸರ್ಜನೆ ಮಾಡಲಾಗುತ್ತದೆ.
ಹಿಂದು ಸಂಘಟನಾ ಮಂಡಳಿ ಗಣಪತಿಯನ್ನು ಅನಂತ ಚತುರ್ದಶಿವರೆಗೆ ಪ್ರತಿಷ್ಠಾಪಿಸಲಾಗುತ್ತದೆ ಎಂಬ ವದಂತಿಗಳು ಹರಿದಾಡಿದ್ದವು. ಇದರಿಂದಾಗಿ ಇತರೆ ಗಣಪತಿ ಉತ್ಸವ ಸಮಿತಿಯವರೂ ತಾವೂ ಸಹ ಮೂರು ಇಲ್ಲವೇ ಐದನೇ ದಿನ ವಿಸರ್ಜನೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲು ಮುಂದಾಗಿದ್ದವು.
ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆಯಲ್ಲಿ ಶುಕ್ರವಾರ ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತುರ್ತು ಸಭೆ ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ರಾಜ್ಯ ಸರ್ಕಾರ ಕೊರೋನ ಹಿನ್ನೆಲೆಯಲ್ಲಿ ಗಣೇಶ ಉತ್ಸವಕ್ಕೆ ಮಾರ್ಗಸೂಚಿ ಹೊರಡಿಸಿದೆ. ಅದರಂತೆ ವಾರ್ಡ್ ಗೆ ಒಂದು ಗಣಪತಿ ಇಡಲು ಸೂಚಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಎಲ್ಲರೂ ಹಬ್ಬ ಆಚರಿಸಲು ಎಂದು ಎಲ್ಲ ಸಮಿತಿಗಳಿಗೆ ಅನುಮತಿ ನೀಡಿದ್ದೇವೆ. ಎಲ್ಲರೂ ಇದಕ್ಕೆ ಸಹಕಾರ ನೀಡಬೇಕು. ಒಂದು ಸಮಿತಿ ಹೆಚ್ಚು ದಿನ ಇರಿಸಿದರೂ ಬೇರೆ ಸಮಿತಿಗಳು ಪ್ರಶ್ನೆ ಮಾಡುತ್ತವೆ. ಅದಕ್ಕೆ ಅವಕಾಶ ನೀಡುವುದು ಬೇಡ ಎಂದಾಗ ಎಲ್ಲರೂ ಸಹಮತ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಎಸ್ಪಿ ಕೆ.ಎಂ.ಶಾಂತಕುಮಾರ್, ಜಿಪಂ ಸಿಇಒ ವೈಶಾಲಿ, ಸಿಪಿಐ ವಸಂತಕುಮಾರ್, ಪ್ರಮುಖರಾದ ಚೆನ್ನಬಸಪ್ಪ, ಜ್ನಾನೇಶ್ವರ್, ಎನ್.ಜೆ.ರಾಜಶೇಖರ್, ಸುನಿಲ್, ಹನುಮಂತಪ್ಪ, ದತ್ತಣ್ಣ ಇನ್ನಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss