ಶಿವಮೊಗ್ಗ: ರಾಜ್ಯ ರಾಜಧಾನಿಗೆ ಸಂಪರ್ಕ ಕಲ್ಪಿಸುವ ಶಿವಮೊಗ್ಗ-ತುಮಕೂರು 216 ಕಿ.ಮೀ.ಗಳ ಚತುಷ್ಪಥ ರಸ್ತೆ ಕಾಮಗಾರಿಯನ್ನು 4425 ಕೋ.ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ಸಂಸದ ಬಿ ವೈ ರಾಘವೇಂದ್ರ ತಿಳಿಸಿದರು.
ಶಿವಮೊಗ್ಗ ಹೊರವಲಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ 34 ಕಿ.ಮೀ. ಉದ್ದದ ವರ್ತುಲರಸ್ತೆ ಹಾಗೂ ತುಂಗಾನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇವೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಭದ್ರಾವತಿ-ಶಿವಮೊಗ್ಗ ನಡುವಿನ ನಾಲ್ಕನೇ ಹಂತದ ಕಾಮಗಾರಿಯು ಆರಂಭಗೊಳಿಸುವಲ್ಲಿ ಇರಬಹುದಾದ ತಾಂತ್ರಿಕ ಸಮಸ್ಯೆ, ಭೂಸ್ವಾದೀನ ಪ್ರಕ್ರಿಯೆ, ಅರಣ್ಯ ಇಲಾಖೆ, ರಸ್ತೆ ಬದಿಯ ಮರಕಡಿತಲೆ ಮುಂತಾದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದ್ದು, ತ್ವರಿತವಾಗಿ ಕಾಮಗಾರಿಗಳನ್ನು ಆರಂಭಿಸಿ, ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದ ಅವರು ಹೆದ್ದಾರಿಯ ಕಾಮಗಾರಿ ಪೂರ್ಣಗೊಳಿಸುವಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮತ್ತು ತುಮಕೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಶ್ರಮ ಮಹತ್ವದ್ದಾಗಿದೆ ಎಂದರು.
ಕೊರೋನ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲವು ಅಭಿವೃದ್ಧಿ ಕಾವiಗಾರಿಗಳು ನಿಧಾನಗತಿಯಲ್ಲಿ ಸಾಗಿವೆ. ಪ್ರಸ್ತುತ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ. ಶರಾವತಿ ಹಿನ್ನೀರಿನ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ 423ಕೋ. ರೂ. ವೆಚ್ಚದ ಸಿಗಂದೂರು-ಕಳಸವಳ್ಳಿ ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ನಿರ್ಮಿಸಲಾಗುತ್ತಿರುವ ಈ ಸೇತುವೆಯು ದೇಶದ ಕೆಲವೇ ಮಾದರಿ ಸೇತುವೆಗಳಲ್ಲೊಂದಾಗಲಿದೆ ಎಂದರು. ಶಿವಮೊಗ್ಗ-ಚಿತ್ರದುರ್ಗದ ಬಾಕಿ ರಸ್ತೆ ಕಾಮಗಾರಿಗೆ 528.00ಕೋ ರೂ. ಅನುದಾನ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಿವಮೊಗ್ಗ ವಿದ್ಯಾನಗರದ ಬಳಿ ರಾ.ಹೆ.13ರಲ್ಲಿ ಬರುವ ಎಲ್.ಸಿ.46ಕ್ಕೆ ಮೇಲ್ಸೇತುವೆ ನಿರ್ಮಾಣಕ್ಕೆ 42ಕೋ.ರೂ. ಬಿಡುಗಡೆ ಮಾಡುವಂತೆಯೂ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.