ಮುಂಬೈ: ಕೊರೋನಾ ನಿಯಂತ್ರಣದ ವಿಚಾರದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಹಾಗೂ ರಾಜ್ಯ ಪಾಲ ಕೋಶಿಯಾರಿ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ.
ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ದಿನೇ, ದಿನೇ ಉಲ್ಬಣಿಸಿದರೂ, ಇದನ್ನು ಠಾಕ್ರೆ ನೇತೃತ್ವದ ಸರ್ಕಾರ ಸಮರ್ಥವಾಗಿ ನಿಭಾಯಿಸಲು ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆರೋಪಿಸಿದ್ದಾರೆ. ಅಲ್ಲದೆ ಅವರು ರಾಜ್ಯಪಾಲರನ್ನು ಭೇಟಿ ಮಾಡಿ, ರಾಜ್ಯಪಾಲರು ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.
ಈ ಮಧ್ಯೆ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಕೋವಿಡ್ ಪೀಡಿತ ಪ್ರದೇಶಗಳಲ್ಲಿ ಜಂಟಿಯಾಗಿ ಸಂಚರಿಸಿ ಸೋಂಕಿತರ ಕಷ್ಟ- ಕಾರ್ಪಣ್ಯಗಳನ್ನು ಪರಿಶೀಲಿಸಬೇಕಿತ್ತು. ಆದರೆ ಜಂಟಿ ಪರಿಶೀಲನೆ ಇದುವರೆಗೆ ನಡೆದಿಲ್ಲ. ಈ ಮಧ್ಯೆ ಬಿಜೆಪಿ ಹಿರಿಯ ಮುಖಂಡ ಡಾ. ಸುಬ್ರಮಣಿಯನ್ ಸ್ವಾಮಿ, ಮಹಾರಾಷ್ಟ್ರದಲ್ಲಿ ಸೋಂಕು ವಿಷಮಿಸಿದ್ದು ಈ ಕೂಡಲೇ ರಾಷ್ಟ್ರಪತಿ ಆಡಳಿತ ಹೇರಲು ಕೇಂದ್ರ ವನ್ನು ಆಗ್ರಹಿಸಿದ್ದಾರೆ. ಅಲ್ಲದೆ ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆ ಶಿವಸೇನೆ ಮೈತ್ರಿ ಮುಂದುವರಿದರೆ ಠಾಕ್ರೆ ರಾಜಕೀಯ ಭವಿಷ್ಯವೇ ಹಾಳುಗುವುದು ಖಂಡಿತ ಎಂದು ಸ್ವಾಮಿ ಎಚ್ಚರಿಸಿದ್ದಾರೆ.