ಶಿಷ್ಯವೇತನಕ್ಕಾಗಿ ಬೀದಿಗಿಳಿದ ಕೊರೋನಾ ವಾರಿಯರ್ಸ್: ವೈದ್ಯ ವಿದ್ಯಾರ್ಥಿಗಳ ಹೋರಾಟಕ್ಕೆ ಎಬಿವಿಪಿ ಸಾಥ್

0
104

ದಾವಣಗೆರೆ: ಕಳೆದ 16 ತಿಂಗಳಿಂದ ಬಾಕಿ ಇರುವ ಶಿಷ್ಯವೇತನ ನೀಡುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಜೆಜೆಎಂ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ಕಾಲೇಜಿನ ಗೃಹ ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು ಸ್ಟೈಪೆಂಡ್ ನೀಡುವವರೆಗೂ ಅನಿರ್ಧಿಷ್ಟಾವಧಿವರೆಗೆ ಮುಷ್ಕರ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಸರ್ಕಾರಿ ಕೋಟದಡಿ ಕಾಲೇಜಿಗೆ ಪ್ರವೇಶ ಪಡೆದಿರುವ ನಾವುಗಳು ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ನಿಸ್ವಾರ್ಥವಾಗಿ ಹಗಲಿರುಳು ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಜಿಲ್ಲಾಸ್ಪತ್ರೆಯು ಶೇ.90ರಷ್ಟು ನಮ್ಮ ಸೇವೆಯನ್ನೇ ಅವಲಂಬಿಸಿದೆ. ಕೊರೋನಾ ಸೋಂಕಿತರ ಚಿಕಿತ್ಸೆಯಲ್ಲೂ ಮುಂಚೂಣಿಯಲ್ಲಿದ್ದುಕೊಂಡು ರೋಗ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದೇವೆ. ಆದರೂ ಕೊರೋನಾ ವಾರಿಯರ್ಸ್ ಆದ ನಮಗೆ ಕಳೆದ 16 ತಿಂಗಳಿನಿಂದ ಶಿಷ್ಯವೇತನವನ್ನೇ ನೀಡಿಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಕಾಲೇಜು ಆರಂಭವಾದಂದಿನಿಂದಲೂ ಸರ್ಕಾರವೇ ಸ್ಟೈಪೆಂಡ್ ನೀಡುತ್ತಿತ್ತು. ಇದೀಗ ಕಾಲೇಜಿನ ಆಡಳಿತ ಮಂಡಳಿ ನೀಡಬೇಕೆಂದು ಸರ್ಕಾರ ಹೇಳುತ್ತಿದೆ. ಸರ್ಕಾರ ಹಾಗೂ ಆಡಳಿತ ಮಂಡಳಿ ಹಗ್ಗ-ಜಗ್ಗಾಟದಲ್ಲಿ ಬಡ, ಮಧ್ಯಮ ವರ್ಗ ಕುಟುಂಬದ ನಾವುಗಳು ಸಂಕಷ್ಟ ಅನುಭವಿಸುವಂತಾಗಿದೆ. ಈ ವಿಷಯವಾಗಿ ಹಲವು ಬಾರಿ ಸರ್ಕಾರದ ಗಮನ ಸೆಳೆದಿದ್ದರೂ ಪ್ರಯೋಜನವಾಗಿಲ್ಲ. ಕಷ್ಟಪಟ್ಟು ಓದಿ ಪ್ರಾಮಾಣಿಕವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ನಾವೇ ತೊಂದರೆ ಅನುಭವಿಸುವಂತಾಗಿದೆ ಎಂದು ಅವರು ಅಳಲು ತೋಡಿಕೊಂಡರು.
ಕಳೆದ 16 ತಿಂಗಳಲ್ಲಿ ಸ್ಟೈಪೆಂಡ್ ನೀಡುವಂತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವರು ಹೀಗೆ ಅನೇಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ರೋಗಿಗಳಿಗೆ ತೊಂದರೆಯಾಗದಂತೆ ಕ್ಯಾಂಡಲ್ ಮಾರ್ಚ್ನಂತಹ ಶಾಂತಿಯುತ ಹೋರಾಟ ನಡೆಸಿದ್ದೇವೆ. ಆದರೂ ಸರ್ಕಾರದಿಂದ ಕೇವಲ ಸುಳ್ಳು ಆಶ್ವಾಸನೆಗಳಷ್ಟೇ ಸಿಕ್ಕಿವೆ. ಹೀಗಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ನಿರ್ಧರಿಸಿದ್ದು, ಸರ್ಕಾರ ಇದಕ್ಕೂ ಸ್ಪಂದಿಸದಿದ್ದರೆ ತುರ್ತು ಸೇವೆಗಳನ್ನು ಕೂಡ ಸ್ಥಗಿತಗೊಳಿಸಿ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಅಭಾವಿಪ ನಗರ ಅಧ್ಯಕ್ಷ ಪವನ್ ರೇವಣಕರ್, ನಗರ ಕಾರ್ಯದರ್ಶಿ ಆಕಾಶ್, ತಾಲೂಕು ಸಂಚಾಲಕ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯ ಹೆಚ್.ವೈ.ಶರತ್, ಪ್ರಥ್ವಿ, ರಾಜು, ವೈದ್ಯ ವಿದ್ಯಾರ್ಥಿಗಳಾದ ಡಾ.ಹಿತಾ, ಡಾ.ರಾಹುಲ್, ಡಾ.ಮೇಘನ, ಡಾ.ನಿಧಿ, ಡಾ.ಹರೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here