ಧಾರವಾಡ: ಶೈಕ್ಷಣಿಕ ನಗರಿ ಧಾರವಾಡ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಶನಿವಾರವೂ ಸುಮಾರು 19 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 300ರ ಗಡಿ ಸಮೀಪಿಸಿದ್ದು (293), ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.
ಶನಿವಾರ ಬಿಡುಗಡೆಗೊಂಡ ಆರೋಗ್ಯ ಇಲಾಖೆ ವರದಿಯಲ್ಲಿ ಇಬ್ಬರು ಬಾಲಕರು, ಇಬ್ಬರು ಯುವಕರು, ಏಳು ಜನ ವೃದ್ಧರು, ಒಂಭತ್ತು ಜನ ಮಧ್ಯ ವಯಸ್ಕರು ಸೇರಿದಂತೆ ಒಟ್ಟು 19 ಜನರಲ್ಲಿ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಈವರೆಗೂ ಈ ಮಹಾಮಾರಿಗೆ 293 ಜನರು ತುತ್ತಾಗಿದ್ದು, ಈ ಪೈಕಿ 157 ಜನರು ಸೋಂಕಿನಿ0ದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಇನ್ನೂ 131 ಪಾಸಿಟಿವ್ ಸಕ್ರೀಯ ಪ್ರಕರಣಗಳಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮರಣೋತ್ತರ ಕೋವಿಡ್ ದೃಢ
ರಕ್ತವಾಂತಿ ಖಾಯಿಲೆಗೆ ಹುಬ್ಬಳ್ಳಿ ತಾಲೂಕು ಛಬ್ಬಿಯ ೭೩ ವರ್ಷದ ವ್ಯಕ್ತಿ ಜೂ.೨೨ರಂದು ಶಸ್ತ್ರ ಚಿಕಿತ್ಸೆಗಾಗಿ ದಾಖಲಾಗಿದ್ದರು. ೨೪ರಂದು ಮೃತಪಟ್ಟಿದ್ದರು. ಶಸ್ತ್ರಚಿಕಿತ್ಸೆಗೆ ಮುನ್ನ ಮೂಗು ಮತ್ತು ಗಂಟಲು ದ್ರವ ಸಂಗ್ರಹಿಸಲಾಗಿತ್ತು. ಮೃತ ವ್ಯಕ್ತಿಯಲ್ಲಿ ಕೋವಿಡ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.