ನಾಗಮಂಗಲ: ಬೆಂಗಳೂರಿನ ಶ್ರೀಮಂತರೊಬ್ಬರ ಮಗನನ್ನು ಅಪಹರಿಸಿ 30ಲ.ರು.ಗೆ ಬೇಡಿಕೆಯಿಟ್ಟು ಪಟ್ಟಣದ ಲಾಡ್ಜ್ ವೊಂದರಲ್ಲಿ ಅಡಗಿದ್ದ ಏಳುಮಂದಿ ಅಪಹರಣಕಾರರನ್ನು ಪಟ್ಟಣ ಠಾಣೆಯ ಪೊಲೀಸರು ಬಂಧಿಸಿ ಬೆಂಗಳೂರಿನ ತಿಲಕ್ನಗರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರಿನ ವಿದ್ಯಾರಣ್ಯಪುರಂ ನಿವಾಸಿಗಳಾದ ಮಹೇಶ್, ಭರತ್, ಮೋಹನ್, ನವ್ಯಂತ್, ಜೋಸೆಫ್, ರವಿಕಿರಣ್ ಹಾಗೂ ರಾಜು ಬಂಧಿತ ಅಪಹರಣಕಾರರು.
ಕೆಲದಿನಗಳ ಹಿಂದಷ್ಟೆ ಬೆಂಗಳೂರಿನ ಶ್ರೀಮಂತರೊಬ್ಬರ 28ವರ್ಷದ ಮಗನನ್ನು ಅಪಹರಿಸಿದ್ದ ಈ ಕಳ್ಳರು 30ಲಕ್ಷ ರು.ಗಳಿಗೆ ಬೇಡಿಕೆಯಿಟ್ಟು, ಹಲವು ಊರುಗಳಲ್ಲಿ ಸುತ್ತಾಡಿ ಕಳೆದೆರಡು ದಿನಗಳ ಹಿಂದಷ್ಟೇ ನಾಗಮಂಗಲ ಪಟ್ಟಣದ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಎಸ್ಎಲ್ಎನ್ ಗ್ರ್ಯಾಂಡ್ ರೆಸಿಡೆನ್ಸಿ ಎಂಬ ಲಾಡ್ಜ್ ನಲ್ಲಿ ತಂಗಿದ್ದರು.
ಯುವಕನ ಅಪಹರಣ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದ ಬೆಂಗಳೂರಿನ ತಿಲಕ್ನಗರ ಠಾಣೆಯ ಪೊಲೀಸರಿಗೆ ಅಪಹರಣಕಾರರ ಸುಳಿವು ಸಿಗುತ್ತಿದ್ದಂತೆ, ಪಟ್ಟಣ ಠಾಣೆಗೆ ಮಾಹಿತಿ ನೀಡಿದ್ದಾರೆ. ಖಚಿತ ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾದ ನಾಗಮಂಗಲ ಪಟ್ಟಣ ಠಾಣೆಯ ಪಿಎಸ್ಐ ರವಿಕಿರಣ್ ನೇತೃತ್ವದ ಪೊಲೀಸರ ತಂಡ ಲಾಡ್ಜ್ ಮೇಲೆ ದಾಳಿ ನಡೆಸಿ ಪರಿಶೀಲಿಸಿದ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಲಾಡ್ಜ್ನಲ್ಲಿ ಸಿಕ್ಕ ಎಲ್ಲಾ ಏಳುಮಂದಿ ಆರೋಪಿಗಳನ್ನು ಮತ್ತು ಅಪಹರಣಗೊಂಡಿದ್ದ ಯುವಕವನ್ನು ಬೆಂಗಳೂರಿನ ತಿಲಕ್ನಗರ ಠಾಣೆಯ ಪೊಲೀಸರ ವಶಕ್ಕೆ ನೀಡಲಾಗಿದ್ದು, ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದೆ.