ಹೊಸ ದಿಗಂತ ವರದಿ,ಶಿರಸಿ:
ಭಾರತೀಯರ ಅಸ್ಮಿತೆಯ ಪ್ರತೀಕವಾಗಿರುವ ಶ್ರೀರಾಮ ಮಂದಿರ ಕಾರ್ಯಕ್ಕೆ ಜನರು ಭಾವೈಕ್ಯತೆಯಡಿ ಭಾಗವಹಿಸಬೇಕು ಎಂದು ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ನಗರದ ಯೋಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಮಹಾಭಿಯಾನಕ್ಕೆ ಚಾಲನೆ ನೀಡಿ ಅವರು ಆಶೀರ್ವದಿಸಿದರು. ಶ್ರೀರಾಮಚಂದ್ರ ಭಾರತೀಯರ ಅಸ್ಮಿತೆಯ ಸಂಕೇತ. ಹಾಗಾಗಿ ಅವರ ಜನ್ಮ ಸ್ಥಾನದಲ್ಲಿ ನಿರ್ಮಾಣ ಆಗಬೇಕಿರುವ ಮಂದಿರ ಅಷ್ಟೇ ಭವ್ಯವಾಗಿರಬೇಕು. ಅದಕ್ಕೆ ರಾಮಭಕ್ತರು ಕೈಜೋಡಿಸಬೇಕು ಎಂದು ನುಡಿದರು.
ಧರ್ಮ, ಜಾತಿ ಮೀರಿ ಅಭಿಯಾನ ನಡೆಯಬೇಕು ಎಂದ ಶ್ರೀಗಳು ಜನರು ಮನಸಾರೆ ನಿಧಿ ಸಮರ್ಪಿಸಬೇಕು. ಮಂದಿರ ನಿರ್ಮಾಣ ಕಾರ್ಯದೊಟ್ಟಿಗೆ ದೇಶದ ಸ್ವಾಭಿಮಾನ ಪುನರ್ ಕಟ್ಟುವ ಕಾರ್ಯವೂ ಆಗಬೇಕು ಎಂದರು.
ಸ್ವಾದಿ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಭೂಮಿಯ ಮೇಲಿನ ಪ್ರತೀ ಜೀವಿಗೂ ಹೇಗೆ ಬದುಕಬೇಕು ಎಂಬ ಆದರ್ಶ ನೀಡಿದವರು ಶ್ರೀರಾಮರಾಗಿದ್ದಾರೆ. ಪ್ರಸ್ತುತ ಅವರಿಗೆ ಗುಡಿ ನಿರ್ಮಿಸುವ ಜತೆ ಅವರ ಆದರ್ಶಗಳ ಅನುಕರಣೆಯ ಪಣವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಹೇಳಿದರು.
ರುದ್ರದೇವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಭಾರತ ವಿಶ್ವ ಗುರುವಾಗುವ ಆಶಯಕ್ಕೆ ರಾಮ ಮಂದಿರ ನಿರ್ಮಾಣದ ಮೂಲಕ ಪ್ರಭಲ ಹೆಜ್ಜೆ ಇಡುತ್ತಿರುವುದು ವಿಶೇಷವಾಗಿದೆ ಎಂದರು.
ಮುಂಡಗೋಡದ ಸಾಲಗಾಂವ ಮಠದ ಶ್ರೀ ವಿರೂಪಾಕ್ಷಪ್ಪ ಮಹಾರಾಜ್ ಮಾತನಾಡಿ, ನಿಧಿಯನ್ನು ಪ್ರತಿಯೊಬ್ಬರೂ ಕೊಡಬೇಕು. ಆಮೂಲಕ ರಾಮನ ಸೇವೆ ಒಪ್ಪಿಸಿಕೊಳ್ಳಬೇಕು ಎಂದರು.
ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ,ದೇಶದ ಇತಿಹಾಸದಲ್ಲಿಯೇ ಅಭೂತಪೂರ್ವ ಅಭಿಯಾನ ಇದಾಗಿದೆ. ಇದನ್ನು ಯಶಸ್ವಿಗೊಳಿಸಲು ದೇಶದ ಪ್ರತೀ ನಾಗರಿಕ ತಮ್ಮ ಕೊಡುಗೆ ನೀಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿ.ಆರ್.ಹೆಗಡೆ, ಪರಿಷತ್ ನ ಗಂಗಾಧರ ಹೆಗಡೆ, ಎಂಎಲ್ಸಿ ಶಾಂತಾರಾಮ ಸಿದ್ದಿ, ಪ್ರಮುಖರಾದ ದಿನೇಶ ಹೆಗಡೆ, ಉದಯ ಸ್ವಾದಿ, ದಿನೇಶಕುಮಾರ, ಸುಧಾಕರ ಜಿ ಹಾಗೂ ವಿಧಾನಸಭಾಧ್ಯಕ್ಷರು ಇದ್ದರು.
ಗಾಯಕಿ ರೇಖಾ ದಿನೇಶ ಪ್ರಾರ್ಥಿಸಿದರು.
ಧರ್ಮ ರಕ್ಷಾ ಸಮಿತಿ ತಾಲೂಕಾ ಕಾರ್ಯದರ್ಶಿ ಕೆ.ಬಿ.ಲೋಕೇಶ ಹೆಗಡೆ ಸ್ವಾಗತಿಸಿದರು. ಜನಾರ್ಧಜ ಆಚಾರ್ಯ ನಿರೂಪಿಸಿದರು. ಅಭಿಯಾನದ ಜಿಲ್ಲಾ ಪ್ರಮುಖ ಮಧು ಕಿರಗಾರ ವಂದಿಸಿದರು.