Wednesday, June 29, 2022

Latest Posts

ಶ್ರೀರಾಮಮಂದಿರಕ್ಕೆ ‘ನಿಧಿ ಸಮರ್ಪಣಾ ಅಭಿಯಾನ’ದ ಕಾರ್ಯಾಲಯಗಳ ಉದ್ಘಾಟನೆ

ಹೊಸ ದಿಗಂತ ವರದಿ, ಉಡುಪಿ:

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನೇತೃತ್ವದಲ್ಲಿ ವಿಶ್ವಹಿಂದು ಪರಿಷತ್ ಸಹಕಾರದಲ್ಲಿ ಮಂಗಳೂರು ವಿಭಾಗ ವ್ಯಾಪ್ತಿಯ ವಿವಿಧ ಜಿಲ್ಲೆಗಳಲ್ಲಿ ಶ್ರೀರಾಮಮಂದಿರಕ್ಕೆ ‘ನಿಧಿ ಸಮರ್ಪಣಾ ಅಭಿಯಾನ’ದ ಕಾರ್ಯಾಲಯಗಳ ಉದ್ಘಾಟನೆ ಹಾಗೂ ಸಂತರ ಸಭೆಗಳನ್ನು ಆಯೋಜಿಸಲಾಗಿದೆ.
ಮಂಗಳೂರಿನ ವಿಶ್ವ ಹಿಂದು ಪರಿಷತ್‌ನ ಕಾರ್ಯಾಲಯ ವಿಶ್ವಶ್ರೀಯಲ್ಲಿ ಡಿ. 4ರಂದು ಬೆಳಗ್ಗೆ 10ಗಂಟೆಗೆ ಕಾರ್ಯಾಲಯ ಉದ್ಘಾಟನೆಯಾಗಲಿದೆ. ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವಿಶ್ವಸ್ಥರೂ ಆಗಿರುವ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಕಾರ್ಯಾಲಯ ಉದ್ಘಾಟಿಸುತ್ತಾರೆ. ಕಾರ್ಯಕ್ರಮದಲ್ಲಿ ವಿಶ್ವಹಿಂದು ಪರಿಷತ್ ವಿಭಾಗ ಕರ್ಯಾದರ್ಶ ಶರಣ್ ಪಂಪ್‌ವೆಲ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ ಅವರು ಭಾಗವಹಿಸುತ್ತಾರೆ. ಮಧ್ಯಾಹ್ನ 3.30ಕ್ಕೆ ಪ್ರತಾಪನಗರದಲ್ಲಿರುವ ಸಂಘನಿಕೇತನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಸಂತರ ಸಭೆಯು ಏರ್ಪಾಡಾಗಿದೆ.
ಡಿ. 5ರಂದು ಉಡುಪಿಯಲ್ಲಿ
ಉಡುಪಿ ರಥಬೀದಿಯ ಪೇಜಾವರ ಮಠದ ವಿಜಯಧ್ವಜ ಛತ್ರದಲ್ಲಿ ಡಿ. 5ರಂದು ಬೆಳಗ್ಗೆ 10ಗಂಟೆಗೆ ಪೇಜಾವರ ಶ್ರೀಗಳು ಕಾರ್ಯಾಲಯ ಉದ್ಘಾಟಿಸುತ್ತಾರೆ. ಕಾರ್ಯಕ್ರಮದಲ್ಲಿ ಅಖಿಲಭಾರತ ಕುಟುಂಬ ಪ್ರಬೋಧನ್ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್, ವಿಶ್ವಹಿಂದು ಪರಿಷತ್ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜ್ ಅವರು ಭಾಗವಹಿಸುತ್ತಾರೆ. ಮಧ್ಯಾಹ್ನ 3.30ಕ್ಕೆ ಪೇಜಾವರ ಮಠದ ರಾಮವಿಠ್ಠಲ ಸಭಾಭವನದಲ್ಲಿ ಸಂತರ ಸಭೆ ಜರಗಲಿದೆ. ಉಡುಪಿ ಜಿಲ್ಲೆಯ ಎಲ್ಲ ಸಂತರು ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ.
ಕಾಸರಗೋಡಿನಲ್ಲಿ ಡಿ. 6ಕ್ಕೆ
ಕಾಸರಗೋಡು ಜಿಲ್ಲೆಯಲ್ಲಿಯೂ ನಿಧಿ ಸಮರ್ಪಣಾ ಅಭಿಯಾನದ ಕಾರ್ಯಾಲಯ ತೆರೆಯಲಾಗುತ್ತದೆ. ಡಿ. 6ರಂದು ಬೆಳಗ್ಗೆ 10ಗಂಟೆಗೆ ಕುಂಬಳೆಯ ವ್ಯಾಯಾಮ ಶಾಲೆಯಲ್ಲಿ ಕಾರ್ಯಾಲಯ ಉದ್ಘಾಟನೆಯಾಗಲಿದೆ. ಕೊಂಡೆವೂರು ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ ಕಾರ್ಯಾಲಯವನ್ನು ಉದ್ಘಾಟಿಸುತ್ತಾರೆ. ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮಂಗಳೂರು ವಿಭಾಗ ಸಂಘಚಾಲಕ್ ಗೋಪಾಲ ಚೆಟ್ಟಿಯಾರ್ ಭಾಗವಹಿಸುತ್ತಾರೆ.
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಟ್ರಸ್ಟ್ ನೇತೃತ್ವದಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರಕ್ಕೆ ಎಲ್ಲ ಹಿಂದುಗಳ ಸಹಭಾಗಿತ್ವ ಇರಬೇಕೆನ್ನುವ ನಿಟ್ಟಿನಲ್ಲಿ ನಿಧಿ ಸಂಗ್ರಹಕ್ಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮುಂದಿನ ಜನವರಿ 15ರಿಂದ ಫೆಬ್ರವರಿ 27ರವರೆಗೆ 45 ದಿನಗಳ ಕಾಲ ಈ ವಿಶೇಷ ಅಭಿಯಾನವನ್ನು ನಡೆಸಲಾಗುತ್ತಿದೆ. ಇದಕ್ಕಾಗಿ ಪ್ರತೀ ಜಿಲ್ಲೆಯಲ್ಲಿ ನಿಧಿ ಸಮರ್ಪಣಾ ಕಾರ್ಯಾಲಯ ತೆರೆಯಲಾಗುತ್ತದೆ. ಎಲ್ಲ ಪೂರ್ವ ಸಿದ್ಧತೆಗಳನ್ನು ನಡೆಸಿ, ನಿಯೋಜಿತ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ, ನಿಧಿ ಸಂಗ್ರಹಿಸುತ್ತಾರೆ. ಆಯ್ದ ಸ್ಥಳಗಳಲ್ಲಿ ಮೆರವಣಿಗೆ, ರಥಯಾತ್ರೆ, ಸಭೆಗಳನ್ನು ಕೂಡ ಆಯೋಜಿಸಲಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss