ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರಕ್ಕೆ ಆ. 5ರಂದು ಭೂಮಿ ಪೂಜನ ನಡೆಯುತ್ತಿದೆ. ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಹಾಗೂ ರಾಮನ ಪ್ರತಿಷ್ಠೆ ಆಗುವವರೆಗೆ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ರಾಮ ತಾರಕ ಮಂತ್ರ ಪಠಿಸುವ ಸಂಕಲ್ಪ ಮಾಡಬೇಕು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ವಿಶ್ವಸ್ಥರಾದ ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಶನಿವಾರ ನೀಲಾವರದ ಗೋಶಾಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪೇಜಾವರ ಶ್ರೀಗಳು, ತಮ್ಮ ಊರಿನಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರ ನಡೆಯುವ ವೇಳೆ ಯಾವ ರೀತಿ ಸಂಕಲ್ಪ ಮಾಡುತ್ತೀರೋ ಅದೇ ರೀತಿ ರಾಮಮಂದಿರ ನಿರ್ಮಾಣದ ವೇಳೆಯೂ ಮಾಡಬೇಕು ಎಂದರು.
ಮಂದಿರ ನಿರ್ಮಾನವೆಂದರೆ ವ್ಯಕ್ತಿತ್ವದ ಪುನರುತ್ಥಾನ
ರಾಮ ಮಂದಿರ ನಿರ್ಮಾಣ ಎಂದರೆ ಕೇವಲ ನಾಲ್ಕು ಗೋಡೆಗಳನ್ನು ಕಟ್ಟುವುದಲ್ಲ. ಅದು ವ್ಯಕ್ತಿತ್ವದ ಪುನರುತ್ಥಾನ. ಆದ್ದರಿಂದ ಪ್ರತಿನಿತ್ಯ ಮನೆಗಳಲ್ಲಿ ಮನೆಯವರನ್ನೆಲ್ಲ ಜೊತೆಯಲ್ಲಿ ಕೂರಿಸಿ ಕನಿಷ್ಠ 108 ಬಾರಿ ರಾಮ ತಾರಕ ಮಂತ್ರದ ಜಪಮಾಡಬೇಕು. ಹಿಂದೆ ಇದು ಅನೂಚಾನವಾಗಿ ನಡೆದುಕೊಂಡು ಬಂದಿತ್ತು. ಆದರೆ ಈ ಮರೆಯಲಾಗಿದೆ. ಅದನ್ನು ಮತ್ತೆ ನಡೆಸುವ ದೀಕ್ಷೆ ತೊಡಬೇಕು ಎಂದು ಪೇಜಾವರ ಶ್ರೀಗಳು ಕರೆ ನೀಡಿದರು.
ಭಾವನಾತ್ಮಕವಾಗಿ ಕಾರ್ಯಕ್ರಮದಲ್ಲಿ ಭಾಗಿ
ಕೋವಿಡ್-19 ಹಿನ್ನೆಲೆಯಲ್ಲಿ ಆ. 5ರ ಭೂಮಿ ಪೂಜನದ ವೇಳೆ ಭಕ್ತರು ಭೌತಿಕವಾಗಿ ಅಯೋಧ್ಯೆಗೆ ಹೋಗಲು ಸಾಧ್ಯವಿಲ್ಲ. ಆದರೆ ನಾವು ಭಾವನಾತ್ಮಕವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಅಂದು ನಮ್ಮ ಮನೆಗಳಲ್ಲಿ ದೇವರ ಮುಂದೆ ದೀಪ ಹಚ್ಚುವುದು, ರಾಮ ನಾಮ ಜಪ, ನಾಮ ಸಂಕೀರ್ತನೆಗಳನ್ನು ಹಾಡುವುದು ಇತ್ಯಾದಿಗಳನ್ನು ಮಾಡಬೇಕು. ದೇವಸ್ಥಾನ, ಭಜನಾ ಮಂದಿರಗಳಲ್ಲಿಯೂ ಸುರಕ್ಷತೆಯನ್ನು ಕಾಪಾಡಿಕೊಂಡು ದೇವರ ಸ್ತುತಿ ಮಾಡಬೇಕು ಎಂದು ತಿಳಿಸಿದರು.
ಅಯೋಧ್ಯೆಯಲ್ಲಿ ಅಂದು ನಡೆಯುವ ಶಿಲಾನ್ಯಾಸ ಸಮಾರಂಭವನ್ನು ಸಾಧ್ಯವಾದಷ್ಟು ಪ್ರತಿಯೊಬ್ಬರೂ ನೇರಪ್ರಸಾರದ ಮೂಲಕ ಕಣ್ತುಂಬಿಕೊಳ್ಳಬೇಕು. ಮನೆಗಳಲ್ಲಿ ಟಿವಿ ಇಲ್ಲದವರಿಗೆ ಬೇಕಾಗಿ ಪ್ರತಿಯೊಂದು ಗ್ರಾಮ, ನಗರಗಳಲ್ಲಿ ಸಾರ್ವಜನಿಕವಾಗಿ ಪ್ರಮುಖ ಸ್ಥಳಗಳಲ್ಲಿ ಬೃಹತ್ ಪರದೆಯನ್ನು ಅಳವಡಿಸಿ ವೀಕ್ಷಿಸಲು ವ್ಯವಸ್ಥೆಮಾಡಬೇಕು. ಆದರೆ ಈ ಸಂದರ್ಭದಲ್ಲಿಯೂ ಸರಕಾರ ಸೋಂಕು ತಡೆಯಲು ವಿಧಿಸಿರುವ ವೈಯಕ್ತಿಕ ಅಂತರ ಅಂತರ ಕಾಯ್ದುಕೊಳ್ಳುವುದು, ಮುಖಕ್ಕೆ ಮಾಸ್ಕ್ ಧರಿಸುವುದನ್ನು ಮರೆಯಬಾರದು ಎಂದು ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥರು ಹೇಳಿದರು.
ರಾಮ ಮಂದಿರಕ್ಕೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಶ್ರೀರಾಮಚಂದ್ರ ಪ್ರಭುವಿನ ಬಂಟ ಹನುಮಂತ ಅವತರಿಸಿರುವುದು ಕರ್ನಾಟಕದಲ್ಲಿ. ಆದ್ದರಿಂದ ರಾಮಮಂದಿರ ನಿರ್ಮಾಣದ ವೇಳೆ ಕರ್ನಾಟಕದ ಜನತೆ ಅತ್ಯಧಿಕ ಶ್ರದ್ಧೆಯಿಂದ ಪಾಲ್ಗೊಳ್ಳಬೇಕು ಎಂದರು.
ನೀಲಾವರದಲ್ಲಿ ಲಕ್ಷ ತುಲಸಿ ಅರ್ಚನೆ
ಭೂಮಿ ಪೂಜನದ ದಿನ ಬೆಳಗ್ಗೆ ನೀಲಾವರ ಗೋಶಾಲೆಯಲ್ಲಿ ಮಠದ ಆರಾಧ್ಯಮೂರ್ತಿ ಶ್ರೀರಾಮ – ಕೃಷ್ಣ- ವಿಠಲ ದೇವರಿಗೆ ಲಕ್ಷ ತುಲಸೀ ಅರ್ಚನೆ ನಡೆಯಲಿದೆ. ಅಲ್ಲದೇ ನವಗ್ರಹ, ರಾಮಮಂತ್ರ, ಮುಖ್ಯಪ್ರಾಣ ಮಂತ್ರಗಳ ಸಹಿತ ಯಾಗ ನಡೆಸಲಾಗುತ್ತದೆ ಎಂದು ಪೇಜಾವರ ಶ್ರೀಗಳು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷರ ಪಿ. ವಿಷ್ಣುಮೂರ್ತಿ ಆಚಾರ್ಯ, ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಭಜರಂಗದಳ ಪ್ರಾಂತ ಸಹಸಂಚಾಲಕ ಸುನೀಲ್ ಕೆ.ಆರ್., ಮಾತೃಮಂಡಳಿ ಜಿಲ್ಲಾಧ್ಯಕ್ಷೆ ಪೂರ್ಣಿಮಾ ಸುರೇಶ್, ಸುರೇಂದ್ರ ಕೋಟೇಶ್ವರ ಉಪಸ್ಥಿತರಿದ್ದರು.