ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿನ ನಿರ್ಮಾಣಕ್ಕೆ ಕಾಲ ಕೂಡಿಬಂದಿದೆ. ಕೆಲ ಸಮಯದ ಹಿಂದೆ ಸರ್ವೋಚ್ಚ ನ್ಯಾಯಾಲಯವು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದ್ದರೆ, ಇದೀಗ ಕೇಂದ್ರ ಸರ್ಕಾರವು ಈ ಸಂಬಂಧ ಟ್ರಸ್ಟ್ ಒಂದನ್ನು ರಚಿಸುವ ಮೂಲಕ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದೆ. ಈ ಟ್ರಸ್ಟ್ ಗೆ ‘ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ’ ಎಂಬುದಾಗಿ ಹೆಸರಿಸಲಾಗಿದೆ. ಇನ್ನೇನು ಕೆಲವೇ ಸಮಯದಲ್ಲಿ ಮಂದಿರ ನಿರ್ಮಾಣ ಕಾರ್ಯವು ಆರಂಭವಾಗುವುದರಲ್ಲಿ ಅನುಮಾನವಿಲ್ಲ.
ಟ್ರಸ್ಟ್ ನ ಕಾರ್ಯಸೂಚಿ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಲ್ಲಿ 15 ಮಂದಿ ಸದಸ್ಯರಿರುತ್ತಾರೆ. ಇವರಲ್ಲಿ 9 ಮಂದಿ ಶಾಶ್ವತ ಸದಸ್ಯರು ಹಾಗೂ 6 ಮಂದಿ ನಾಮಕರಣ ಸದಸ್ಯರು. ಇದು ಮಂದಿರ ನಿರ್ಮಾಣದ ಕುರಿತಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ.
ರಾಮನವಮಿಗೆ ಚಾಲನೆ: ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಏಪ್ರಿಲ್ 2ರಂದು ಚಾಲನೆ ಸಿಗುವ ಸಾಧ್ಯತೆಗಳಿವೆ. ಅಂದು ಶ್ರೀರಾಮ ನವಮಿಯಾಗಿದ್ದು, ಅದು ದೇವಾಲಯ ನಿರ್ಮಾಣ ಕಾರ್ಯ ಆರಂಭಿಸಲು ಪ್ರಶಸ್ತವೆಂದು ಹೇಳಲಾಗುತ್ತಿದೆ.
ಮೂಲ ಯೋಜನೆಗೆ ಆಗ್ರಹ: ಅಯೋಧ್ಯೆ ರಾಮಜನ್ಮಭೂಮಿ ಆಂದೋಲನದಲ್ಲಿ ಪ್ರಧಾನ ಪಾತ್ರ ವಹಿಸಿದ್ದು ವಿಶ್ವಹಿಂದು ಪರಿಷತ್. ಅದು ಮಂದಿರ ನಿರ್ಮಾಣದ ಯೋಜನೆಯನ್ನೂ ರೂಪಿಸಿತ್ತು. ಇನ್ನೀಗ ನೂತನ ಟ್ರಸ್ಟ್ ಈ ಯೋಜನೆಯ ಪ್ರಕಾರವೇ ಮಂದಿರವನ್ನು ನಿರ್ಮಿಸಬೇಕೆಂದು ವಿಶ್ವ ಹಿಂದು ಪರಿಷತ್ ಕೋರಿದೆ. ಈಗಾಗಲೆ ಮಂದಿರ ನಿರ್ಮಾಣದ ಬಹುಪಾಲು ಕೆಲಸಗಳು ಮುಗಿದಿದ್ದು ಪ್ಲಾನ್ ಬದಲಿಸಿದರೆ ಅದು ವ್ಯರ್ಥವಾಗಬಹುದು ಎಂಬುದು ವಿಹಿಂಪದ ಚಿಂತನೆ.
ಟ್ರಸ್ಟ್ ನಲ್ಲಿ ಸರ್ಕಾರಿ ಬಾಬುಗಳು ಬೇಕಿತ್ತೆ?: ಟ್ರಸ್ಟ್ ನಲ್ಲಿ ಮೂವರು ಸರ್ಕಾರಿ ಅಧಿಕಾರಿಗಳನ್ನೂ ಸೇರಿಸಿಕೊಳ್ಳಲಾಗಿದೆ. ಬಹುಶಃ ಮಂದಿರ ನಿರ್ಮಾಣದಲ್ಲಿ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲು ನೆರವಾಗುವುದಕ್ಕಾಗಿ ಅವರನ್ನು ನೇಮಿಸುವುದಿರಬೇಕು. ಆದರೆ, ದೇವಸ್ಥಾನದ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅದರಲ್ಲೂ ದಕ್ಷಿಣ ಭಾರತದ ಬಹುತೇಕ ದೇವಸ್ಥಾನಗಳಲ್ಲಿ ಸರ್ಕಾರದ ಹಸ್ತಕ್ಷೇಪ ಹೆಚ್ಚುತ್ತಿರುವುದರಿಂದ ಅಯೋಧ್ಯೆ ಟ್ರಸ್ಟಿನಲ್ಲಿ ಸರ್ಕಾರಿ ಅಧಿಕಾರಿಗಳು ಬೇಡವಿತ್ತು ಎಂಬುದು ಹಿರಿಯ ತಜ್ಞರೊಬ್ಬರ ಅಭಿಪ್ರಾಯ. ಒಂದು ವೇಳೆ ಮುಂದಕ್ಕೆ `ಜಾತ್ಯತೀತ ‘ ಅಥವಾ ಎಡಪಂಥೀಯ ಸರ್ಕಾರವೊಂದು ಅಧಿಕಾರಕ್ಕೆ ಬಂದರೆ ಅಯೋಧ್ಯೆ ಮಂದಿರದ ವಿಷಯದಲ್ಲೂ ಹಸ್ತಕ್ಷೇಪ ನಡೆಸೀತು ಎಂಬುದು ಅವರ ಕಳವಳ. ಮೂವರು ಸರ್ಕಾರಿ ಪ್ರತಿನಿಧಿಗಳ ಬದಲಾಗಿ ಹಿಂದೂ ಧಾರ್ಮಿಕ ನೇತಾರರನ್ನೆ ಟ್ರಸ್ಟಿ ಯಾಗಿ ನೇಮಿಸಬಹುದಾಗಿತ್ತು ಎಂದು ಅವರು ಅಭಿಪ್ರಾಯ ಪಡುತ್ತಾರೆ.
ಅಯೋಧ್ಯೆ ದೇವಾಲಯವು ಯಾವುದೇ ವಿಷಯದಲ್ಲೂ ಸರ್ಕಾರದ ಮರ್ಜಿಗೆ ಕಾಯುವಂತಿರಬಾರದು. ಭಕ್ತರ ಅಭೀಷ್ಟದ ಪ್ರಕಾರ, ಭಕ್ತರ ದೇಣಿಗೆಯಿಂದಲೇ ನಡೆಯುವಂತಾಗಬೇಕು ಎಂಬುದು ಕೆಲವರ ಅಭಿಪ್ರಾಯ.
ಟ್ರಸ್ಟ್ ನ ಕಾರ್ಯವ್ಯವಹಾರಗಳು:
- ಟ್ರಸ್ಟ್ ನ ಕಾಯಂ ಕಚೇರಿಯ ಕುರಿತಂತೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಮೊದಲ ಸಭೆಯಲ್ಲಿ ನಿರ್ಧರಿಸಲಾಗುವುದು. ಪ್ರಸ್ತುತ ದಿಲ್ಲಿಯ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ಟ್ರಸ್ಟ್ ನ ಕಚೇರಿಯೆಂದು ಘೋಷಿಸಲಾಗಿದೆ.
- ಮಂದಿರ ನಿರ್ಮಾಣದ ಕುರಿತಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಟ್ರಸ್ಟ್ ಸ್ವತಂತ್ರವಾಗಿದೆ. ಅದೇ ರೀತಿ ಭಕ್ತರಿಗೆ ಅನುಕೂಲವಾಗುವಂತಹ ಇನ್ನಿತರ ಸೌಲಭ್ಯಗಳ ಕುರಿತೂ ಟ್ರಸ್ಟ್ ನಿರ್ಧಾರ ತಾಳುವುದು. ಅಡುಗೆ ಮನೆ, ಭೋಜನ ಶಾಲೆ ನಿರ್ಮಾಣ, ಗೋಶಾಲೆ , ವಸ್ತು ಸಂಗ್ರಹಾಲಯ ಮುಂತಾದವುಗಳ ನಿರ್ಮಾಣದ ಕುರಿತೂ ಟ್ರಸ್ಟ್ ನಿರ್ಧಾರ ತಾಳಲಿದೆ.
- ಮಂದಿರ ನಿರ್ಮಾಣಕ್ಕೆ ಬೇಕಾದ ನೆರವನ್ನು ಟ್ರಸ್ಟ್ ಯಾರಿಂದ ಬೇಕಾದರೂ ಪಡೆಯಬಹುದು. ಯಾವುದೇ ವ್ಯಕ್ತಿಯಿಂದ ಅಥವಾ ಸಂಸ್ಥೆಯಿಂದ ದೇಣಿಗೆ, ಅನುದಾನ, ಸ್ಥಿರಾಸ್ತಿ ಅಥವಾ ಇನ್ನಿತರ ಬಗೆಯ ನೆರವುಗಳನ್ನು ಟ್ರಸ್ಟ್ ಪಡೆದುಕೊಳ್ಳಬಹುದು. ಟ್ರಸ್ಟ್ ಅವಶ್ಯ ಬಿದ್ದರೆ ಸಾಲವನ್ನೂ ತೆಗೆದುಕೊಳ್ಳಬಹುದು.
- ಟ್ರಸ್ಟಿಗಳ ಮಂಡಳಿಯು ಒಬ್ಬರನ್ನು ತನ್ನ ಅಧ್ಯಕ್ಷರನ್ನಾಗಿ ಹಾಗೂ ಮ್ಯಾನೇಜಿಂಗ್ ಟ್ರಸ್ಟಿಯಾಗಿ ನೇಮಿಸಿಕೊಳ್ಳಲಿದೆ. ಅವರು ಟ್ರಸ್ಟ್ ಸಭೆಯ ಅಧ್ಯಕ್ಷತೆ ವಹಿಸುವರು. ಇದೇ ವೇಳೆ, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿಯನ್ನು ಕೂಡ ನೇಮಿಸಲಾಗುವುದು.
- ಶ್ರೀರಾಮ ಮಂದಿರ ನಿರ್ಮಾಣಕ್ಕೆ ಈಗಿರುವ ಹಣದ ಹೂಡಿಕೆಯ ಕುರಿತಂತೆ ಟ್ರಸ್ಟ್ ನಿರ್ಧರಿಸಲಿದೆ. ಮಂದಿರಕ್ಕೆ ನಡೆಯುವ ಹಣದ ಹೂಡಿಕೆಯು ಟ್ರಸ್ಟ್ ನ ಹೆಸರಿನಲ್ಲಿ ನಡೆಯಲಿದೆ.
- ರಾಮ ಮಂದಿರ ನಿರ್ಮಾಣಕ್ಕಾಗಿ ನೀಡಲಾಗಿರುವ ದೇಣಿಗೆಗಳನ್ನು ಟ್ರಸ್ಟ್ ಕೇವಲ ಮಂದಿರ ನಿರ್ಮಾಣಕ್ಕಷ್ಟೇ ಉಪಯೋಗಿಸುವುದು. ಬೇರಾವುದೇ ಕಾರ್ಯಕ್ಕೆ ಆ ಹಣವನ್ನು ಉಪಯೋಗಿಸುವಂತಿಲ್ಲ.
- ಶ್ರೀರಾಮ ಮಂದಿರ ಟ್ರಸ್ಟ್ ಗೆ ಒಳಪಟ್ಟ ಯಾವುದೇ ಸ್ಥಿರಾಸ್ತಿಯನ್ನು ಮಾರುವ ಅಧಿಕಾರ ಟ್ರಸ್ಟಿಗಳಿಗಿಲ್ಲ.
- ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ದೇಣಿಗೆ ಮತ್ತು ಖರ್ಚಿನ ವಿವರಗಳುಳ್ಳ ಲೆಕ್ಕಪತ್ರಗಳನ್ನು ಟ್ರಸ್ಟ್ ಇಟ್ಟುಕೊಳ್ಳಬೇಕು. ಈ ಸಂಬಂಧ ಬ್ಯಾಲೆನ್ಸ್ ಶೀಟ್ ರೂಪಿಸಬೇಕು ಹಾಗೂ ಅದನ್ನು ಆಡಿಟ್ ಮಾಡುತ್ತಿರಬೇಕು.
- ಟ್ರಸ್ಟಿಗಳಿಗೆ ಯಾವುದೇ ವೇತನವಿರುವುದಿಲ್ಲ. ಆದರೆ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಯಾವುದೇ ಪ್ರಯಾಣದ ವೆಚ್ಚವನ್ನು ನೀಡಲಾಗುವುದು.
ಟ್ರಸ್ಟ್ ನ ಸದಸ್ಯರಿವರು:
1.ಕೆ. ಪರಾಶರನ್: ಸುಪ್ರೀಂ ಕೋರ್ಟಿನ ಹಿರಿಯ ವಕೀಲರಾದ ಪರಾಶರನ್ ಅವರು ಶ್ರೀರಾಮ ಜನ್ಮಭೂಮಿ ಹೋರಾಟದಲ್ಲಿ ಆರಂಭದಿಂದಲೇ ತೊಡಗಿಸಿಕೊಂಡವರು. ಅವರನ್ನು ಟ್ರಸ್ಟ್ ನ ಚೇರ್ಮನ್ ಆಗಿ ನೇಮಿಸಲಾಗಿದೆ.
2.ಯುಗಪುರುಷ ಮಹಾಮಂಡಲೇಶ್ವರ ಸ್ವಾಮಿ ಪರಮಾನಂದ ಸ್ವಾಮೀಜಿ, ಹರಿದ್ವಾರ: ಪ್ರಖಾಂಡ ಪಂಡಿತರು, ಯೋಗ ಗುರು, ತತ್ತ್ವಜ್ಞಾನಿ ಹಾಗೂ ಧಾರ್ಮಿಕ ಗುರುವಾಗಿರುವವರು ಈ ಸ್ವಾಮೀಜಿ.
3.ಪೂಜ್ಯ ಶ್ರೀ ಗೋವಿಂದ ದೇವ್ಗಿರೀಜಿ ಮಹಾದೇವ್, ಪುಣೆ: ಹಿರಿಯ ಹಿಂದು ವಿದ್ವಾಂಸರು. ರಾಮಾಯಣ, ಮಹಾಭಾರತ ಭಗವದ್ಗೀತೆ ಮತ್ತು ಇತರ ಪುರಾತನ ಗ್ರಂಥಗಳಲ್ಲಿ ಪಾರಂಗತರು.
4.ಶ್ರೀ ವಿಮಲೇಂದ್ರ ಪ್ರತಾಪ್ ಮಿಶ್ರಾ, ಅಯೋಧ್ಯೆ ಸಂಸ್ಥಾನ: ಹಿಂದೊಮ್ಮೆ ಅಯೋಧ್ಯೆಯನ್ನು ಆಳಿದ್ದ ರಾಜವಂಶಕ್ಕೆ ಸೇರಿದವರು. ಅವರು ಪ್ರಸ್ತುತ ಅಯೋಧ್ಯೆ ಸಂಸ್ಥಾನದ ಉತ್ತರಾಧಿಕಾರಿಯಾಗಿದ್ದು, ಮಂದಿರ ನಿರ್ಮಾಣದ ಹೊಣೆಯು ಅವರ ಹೆಗಲೇರಿದೆ. ಅವರನ್ನು ಅಯೋಧ್ಯೆಯಲ್ಲಿ ಈಗಲೂ `ರಾಜಾ ಸಾಹೇಬ್’ ಎಂದು ಕರೆಯುತ್ತಾರೆ.
5.ಜಗದ್ಗುರು ಶಂಕರಾಚಾರ್ಯ ಸ್ವಾಮಿ ವಾಸುದೇವಾನಂದ ಸರಸ್ವತಿಜೀ ಮಹಾರಾಜ್, ಪ್ರಯಾಗ್ರಾಜ್
6.ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ, ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ರಾಮಜನ್ಮಭೂಮಿ ಆಂದೋಲನದಲ್ಲಿ ಸಕ್ರಿಯ ಪಾತ್ರ ವಹಿಸಿದವರು. ಅವರು ಈ ಟ್ರಸ್ಟಿನ ಸದಸ್ಯರಾಗುವುದು ಖಚಿತವಾಗಿತ್ತು. ಆದರೆ ಅವರು ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ಅವರ ಉತ್ತರಾಧಿಕಾರಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಟ್ರಸ್ಟ್ ನಲ್ಲಿ ನೇಮಿಸಲಾಗಿದೆ.
7.ಕಮಲೇಶ್ವರ ಚೌಪಾಲ್, ಪಾಟ್ನಾ (ದಲಿತ ಸದಸ್ಯರು), ಬಿಹಾರ: 1989ರಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದವರು ಇವರು. ಅವರಿಗೀಗ ಮಂದಿರ ನಿರ್ಮಾಣದಲ್ಲೂ ಸಕ್ರಿಯ ಪಾತ್ರ ನೀಡಲಾಗಿದೆ.
8.ಡಾ. ಅನಿಲ್ ಮಿಶ್ರಾ, ಹೋಮಿಯೋಪತಿ ವೈದ್ಯರು, ಅಯೋಧ್ಯೆ: ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ನಿವಾಸಿಯಾಗಿರುವ ಇವರು ಅಯೋಧ್ಯೆಯಲ್ಲಿ ಖ್ಯಾತ ಹೋಮಿಯೋಪತಿ ವೈದ್ಯರು. ಉತ್ತರ ಪ್ರದೇಶದ ಹೋಮಿಯೋಪತಿ ಮೆಡಿಸಿನ್ ಬೋರ್ಡ್ ನ ರಿಜಿಸ್ಟಾರ್. 1992ರಲ್ಲಿ ವಿನಯ ಕತಿಯಾರ್ ಜತೆ ಸೇರಿಕೊಂಡು ಶ್ರೀರಾಮ ಜನ್ಮಭೂಮಿ ಆಂದೋಲನದಲ್ಲಿ ಸಕ್ರಿಯರಾಗಿದ್ದರು.
9 ಮತ್ತು 10: ಇಬ್ಬರು ಹಿಂದುಗಳನ್ನು ಟ್ರಸ್ಟ್ ನಾಮಕರಣ ಮಾಡಲಿದೆ.
11.ಮಹಂತ ದೀನೇಂದ್ರ ದಾಸ್: ಸುಪ್ರೀಂ ಕೋರ್ಟಿನ ಆದೇಶದ ಪ್ರಕಾರ ನಿರ್ಮೋಹಿ ಅಖಾಡಾದ ಮುಖ್ಯಸ್ಥ ಮಹಂತ ದೀನೇಂದ್ರ ದಾಸ್ ಅವರು ಟ್ರಸ್ಟಿಯಾಗಲಿದ್ದಾರೆ.
12.ಐಎಎಸ್ ಅಧಿಕಾರಿ: ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಐಎಎಸ್ ಆಧಿಕಾರಿಯೊಬ್ಬರನ್ನು ನೇಮಿಸಲಾಗುವುದು. ಇವರು ಹಿಂದೂ ಆಗಿರಬೇಕಾಗುತ್ತದೆ. ಇವರು ಜಂಟಿ ಕಾರ್ಯದರ್ಶಿ ಹುದ್ದೆಗಿಂತ ಕೆಳಗಿರಬಾರದು.
13.ಐಎಎಸ್ ಅಧಿಕಾರಿ: ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಉತ್ತರ ಪ್ರದೇಶ ಸರ್ಕಾರದ ಐಎಎಸ್ ಅಧಿಕಾರಿಯೊಬ್ಬರನ್ನು ನೇಮಿಸಲಾಗುವುದು. ಅವರು ಹಿಂದು ಆಗಿರಬೇಕು ಹಾಗೂ ಕಾರ್ಯದರ್ಶಿ ಹುದ್ದೆಗಿಂತ ಕೆಳಗಿರಬಾರದು.
14.ಅಯೋಧ್ಯೆ ಜಿಲ್ಲಾಧಿಕಾರಿ: ಇವರು ಮಾಜಿ ಸರ್ಕಾರಿ ಅಧಿಕಾರಿಯಾಗಿರಬೇಕು ಹಾಗೂ ಹಿಂದೂ ಆಗಿರಬೇಕು. ಹಾಲಿ ಜಿಲ್ಲಾಧಿಕಾರಿ ಹಿಂದೂ ಅಲ್ಲವಾಗಿದ್ದರೆ ಅಪರ ಜಿಲ್ಲಾಧಿಕಾರಿ (ಅವರೂ ಹಿಂದೂವಾಗಿರಬೇಕು) ಟ್ರಸ್ಟ್ ಸದಸ್ಯರಾಗುತ್ತಾರೆ.
15.ಟ್ರಸ್ಟಿಗಳೇ ನೇಮಿಸುವ ಅಧ್ಯಕ್ಷ: ರಾಮ ಮಂದಿರ ಅಭಿವೃದ್ಧಿ ಮತ್ತು ಆಡಳಿತಕ್ಕೆ ಸಂಬಂಧಿತ ಜವಾಬ್ದಾರಿ ನೀಡಲಾಗುವುದು. ಇವರು ಕೂಡ ಹಿಂದು ಆಗಿರಬೇಕು.