Tuesday, June 28, 2022

Latest Posts

ಶ್ರೀರಾಮ ಮಂದಿರ ಹಿಂದೂ ಶಕ್ತಿಯ ಜಾಗೃತ ಪುನರುತ್ಥಾನದ ಸಂಕೇತ: ಮನೋಹರ ಮಠದ


ಹೊಸ ದಿಗಂತ ವರದಿ , ಕೊಪ್ಪಳ:

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಯೋಜನೆಯ ಅನ್ವಯ ಸಮಸ್ತ ಹಿಂದೂ ಸಮಾಜದಿಂದ ಮಂದಿರ ನಿರ್ಮಾಣಕ್ಕಾಗಿ ಧನ ಸಂಗ್ರಹಣೆಗೆ, ತನ್ನ ಸಂಪೂರ್ಣ ಸಹಯೋಗ ನೀಡುವುದಾಗಿ ವಿಶ್ವ ಹಿಂದೂ ಪರಿಷದ್ (ವಿಹಿಂಪ) ನಿರ್ಧರಿಸಿದೆ ಎಂದು ವಿಶ್ವ ಹಿಂದೂ ಪರಿಷದ್‍ನ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಮನೋಹರ ಮಠದ ಹೇಳಿದರು.
ಭಾನುವಾರ ಮೀಡಿಯಾ ಕ್ಲಭ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಂದಿರ ನಿರ್ಮಾಣ ಕೇವಲ ಮತ್ತೊಂದು
ಮಂದಿರದ ನಿರ್ಮಾಣದಂತೆ ಅಲ್ಲ. ಇದು ಜಾಗೃತ ಹಿಂದೂ ಶಕ್ತಿಯ ಪುನರುತ್ಥಾನದ ಸಂಕೇತವಾಗಿದೆ. ಸಮಾಜವನ್ನು ಮೇಲು ಕೀಳು ಎಂಬ ಭಾವನೆಗಳಿಂದ ಮುಕ್ತಗೊಳಿಸುವ ಮಂದಿರವಾಗಿದ್ದು, ಮಂದಿರ ಕಲ್ಲಿನ ಬ್ಲಾಕ್‍ಗಳ ಸಹಾಯದಿಂದ ನಿರ್ಮಿತವಾಗಲಿದೆ. ಮಂದಿರದ ವಿಸ್ತೀರ್ಣ 27 ಎಕರೆ, 54,000 ಚದರ ಅಡಿಯ ಜಾಗದಲ್ಲಿ ಮಂದಿರ ನಿರ್ಮಾಣಗೊಳ್ಳಲಿದೆ. 360 ಅಡಿ ಉದ್ದ ಹಾಗೂ 235 ಅಡಿ ಅಗಲದ ಮಂದಿರದಲ್ಲಿ ಮೂರು ಅಂತಸ್ತು ಹಾಗೂ 5 ಮಂಟಪಗಳಿರುತ್ತವೆ. ನೆಲಮಾಳಿಗೆಯಲ್ಲಿ 160 ಕಂಬಗಳು, ಮೊದಲನೆಯ ಮಹಡಿಯಲ್ಲಿ 132 ಕಂಬಗಳು, ಎರಡನೆಯ ಮಹಡಿಯಲ್ಲಿ 74 ಕಂಬಗಳಿರುತ್ತವೆ. ಮಂದಿರ ನಿರ್ಮಾಣದ ಜೊತೆಗೆ ಅಂತಾರಾಷ್ಟ್ರೀಯ ದರ್ಜೆಯ ಗ್ರಂಥಾಲಯ, ದಾಖಲಾತಿಗಳ ಭಂಡಾರ, ವಸ್ತು ಸಂಗ್ರಹಾಲಯ, ಸಂಶೋಧನಾ ಕೇಂದ್ರ, ಯಜ್ಞಶಾಲೆ, ವೇದ ಪಾಠಶಾಲೆ, ಸತ್ಸಂಗ ಭವನ, ಪ್ರಸಾದ ವಿನಿಯೋಗ ಸ್ಥಳ, ಅಂಫಿ ಥಿಯೇಟರ್, ಧರ್ಮಶಾಲೆ, ಪ್ರದರ್ಶನಾಲಯ ಸೇರಿದಂತೆ ಹಲವು ಸೌಲಭ್ಯಗಳು ಮಂದಿರದ ಆವರಣದಲ್ಲಿ ನಿರ್ಮಾಣವಾಗಲಿವೆ ಎಂದರು ಹೇಳಿದರು.
ದೇಶದಲ್ಲಿ ವಿಹಿಂಪ ಕಾರ್ಯಕರ್ತರು, ಅಯೋಧ್ಯೆಯಲ್ಲಿನ ಶ್ರೀರಾಮ ಜನ್ಮಭೂಮಿ ಮಂದಿರದ ನಿರ್ಮಾಣಕ್ಕೆ ಹಾಗೂ ಅಲ್ಲಿನ ಇತರೆ ಸೌಲಭ್ಯಗಳಿಗೆ ಅನುವಾಗುವಂತ 4 ಲಕ್ಷ ಹಳ್ಳಿಗಳನ್ನು, 11 ಕೋಟಿ ಕುಟುಂಬಗಳನ್ನು ತಲುಪಲಿದ್ದಾರೆ. ಕರ್ನಾಟಕ ರಾಜ್ಯದಲ್ಲಿ 27,500 ಹಳ್ಳಿಗಳನ್ನು, ಸುಮಾರು 90 ಲಕ್ಷ ರಾಮಭಕ್ತರನ್ನು ತಲುಪುವ, ಹಾಗೂ ರಾಮಮಂದಿರಕ್ಕೆ ಧನ ಸಂಗ್ರಹಿಸುವ ಯೋಜನೆಯನ್ನು ವಿಹಿಂಪ ಹಾಕಿಕೊಂಡಿದೆ. ಉಡುಪಿಯ ಪೇಜಾವರ ಮಠದ ಪೂಜ್ಯ ಸ್ವಾಮೀಜಿಯವರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಶ್ರೀರಾಮ ಜನ್ಮಭೂಮಿ ಟ್ರಸ್ಟ್‍ನ ವಿಶ್ವಸ್ತರಲ್ಲಿ ಒಬ್ಬರಾಗಿದ್ದಾರೆ . ರೂ 10, ರೂ 100, ರೂ 1000, ದ ಮುದ್ರಿತ ಕೂಪನ್ ಗಳ ಸಹಾಯದಿಂದ ಧನಸಂಗ್ರಹ ನಡೆಯಲಿದೆ. ಇನ್ನು ರೂ 2000, ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಅರ್ಪಿಸಿದ ಭಕ್ತರಿಗೆ ರಸೀದಿ ನೀಡಲಾಗುವುದು ಎಂದು ಹೇಳಿದರು.
ಈ ಗೋಷ್ಠಿಯಲ್ಲಿ ಆರ್‍ಎಸ್‍ಎಸ್‍ಜಿಲ್ಲಾ ಸಂಘ ಚಾಲಕ ಬಸವರಾಜ ಡಂಬಳ, ಅಭಿಯಾನದ ಜಿಲ್ಲಾ ಸಂಯೋಜಕ ಪ್ರಾಣೇಶ ಜೋಶಿ, ವಿಶ್ವ ಹಿಂದು ಪರಿಷದ್ ಜಿಲ್ಲಾಧ್ಯಕ್ಷ ಶಿವಕುಮಾರ ಹಕ್ಕಾಪಕ್ಕಿ, ಜಿಲ್ಲಾ ಕಾರ್ಯದರ್ಶಿ ವೇಣುಗೋಪಾಲ ಜಹಿಗಿರದಾರ, ಬಳ್ಳಾರಿ ವಿಭಾಗದ ಸಹ ಸಂಯೋಜಕ ಅಯ್ಯನಗೌಡ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss