ಹೊಸದಿಗಂತ ಆನ್ ಲೈನ್ ಡೆಸ್ಕ್:
ಶ್ರೀಲಂಕಾದ ರಾಜಧಾನಿ ಕೊಲಂಬೋದ ಉನ್ನತ ಭದ್ರತಾ ಜೈಲಿನಲ್ಲಿ ತಡರಾತ್ರಿ ಗಲಭೆ ನಡೆದಿದೆ. ಈ ಗಲಭೆಯಲ್ಲಿ 8 ಮಂದಿ ಬಲಿಯಾಗಿದ್ದು, 55 ಮಂದಿ ಗಾಯಗೊಂಡಿದ್ದಾರೆ.
ರಾಜಧಾನಿ ಕೊಲಂಬೋದಿಂದ 15 ಕಿ.ಮೀ ದೂರದಲ್ಲಿರುವ ಮಹಾರಾ ಜೈಲಿನಲ್ಲಿ ಗುಂಡಿನ ದಾಳಿ ನಡೆದಿದೆ. ಶ್ರೀಲಂಕಾದ ಕಾರಾಗೃಹಗಳಲ್ಲಿ ಕೊರೋನಾ ಸೋಂಕಿತರ ಸಾಮರ್ಥ್ಯಕ್ಕೂ ಹೆಚ್ಚಿನ ಜನರನ್ನು ಇರಿಸಿದ ಹಿನ್ನೆಲೆ ಸ್ಥಳದಲ್ಲಿ ಅಶಾಂತಿ ಮನೆ ಮಾಡಿತ್ತು ಎಂದು ತಿಳಿದು ಬಂದಿದೆ. ಜೈಲಿನಲ್ಲಿದ್ದ 175 ಮಂದಿಗೆ ಕೊರೋನಾ ಸೋಂಕು ತಗುಲಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗಲಭೆ ವೇಳೆ ಕೆಲವರು ಜೈಲಿನಿಂದ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ತಡೆಯಲು ಬಂದ ಜೈಲು ಅಧಿಕಾರಿಗಳಿಗೆ ಗಾಯ ಮಾಡಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಅಧಿಕಾರಿಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಜೈಲಿನ ಸುತ್ತಲೂ 200 ಪೊಲೀಸ್ ಕಮಾಂಡೋಗಳು ಸೇರಿದಂತೆ 600 ಅಧಿಕಾರಿಗಳನ್ನು ಪರಿಸ್ಥಿತಿ ನಿಯಂತ್ರಿಸಲು ನಿಯೋಜಿಸಲಾಗಿದೆ ಎಂದು ಪೊಲೀಸ್ ವಕ್ತಾರ ಅಜಿತ್ ರೋಹಾನಾ ತಿಳಿಸಿದ್ದಾರೆ.