Monday, July 4, 2022

Latest Posts

ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದಲ್ಲಿ ಫುಡ್‌ಕಿಟ್ ವಿತರಣಾ ಕಾರ್ಯಕ್ರಮ

ಚಿತ್ರದುರ್ಗ: ಕೊರೋನಾ ವೈರಸ್ ಹಾವಳಿಯಿಂದ ಕಂಗಾಲಾಗಿದ್ದ ಕಡುಬಡವರಿಗೆ, ಶೋಷಿತ ಸಮುದಾಯಗಳಿಗೆ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ಸಂಕಷ್ಟ ಕಾಲದಲ್ಲಿ ಮಾತೃ ಸ್ಥಾನ ತುಂಬಿ ಅನ್ನದಾತರಾಗಿ ನೊಂದವರ ಬಂಧುವಾಗಿದ್ದಾರೆ ಎಂದು ಕುಳುವ ಸಮಾಜದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಜಯಶೀಲಾ ಹೇಳಿದರು.
ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದಲ್ಲಿ ಗುರುವಾರ ನಡೆದ ಫುಡ್‌ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾರೆಯ ಸೊಪ್ಪಾದರೂ ಸರಿ, ಕಾಯಕದಿಂದ ಬಂದುದು ಲಿಂಗಕ್ಕೆ ಅರ್ಪಿತವಲ್ಲದೆ, ದುರಾಸೆಯಿಂದ ಬಂದುದು ಅನರ್ಪಿತ ಎಂದು ಕಾಯಕಯೋಗಿ ಶ್ರೀ ಗುರು ನೂಲಿಯ ಚಂದಯ್ಯ ಹೇಳಿದ್ದಾರೆ. ಅವರ ಸತ್ಯ ಶುದ್ಧ, ವಾಣಿಯ ವಚನದಂತೆ, ತುಂಬಾ ಕಷ್ಟಪಟ್ಟು, ಈ ಧರೆಯ ಮೇಲೆ ತಬ್ಬಲಿಗಳಾಗಿ ಅತ್ಯಂತ ನಿಕೃಷ್ಟವಾಗಿ ಬದುಕು ಸವೆಸುತ್ತಿರುವ ನಮ್ಮ ಬಡ ಸಮಾಜಗಳಿಗೆ ಗುರುಗಳು ನೆರವು ನೀಡುವ ಮೂಲಕ ಸಂಕಷ್ಟ ಪರಿಹರಿಸಿದ್ದಾರೆ ಎಂದರು.
ಶೋಸಿಷ ಸಮುದಾಯಗಳಾದ ಕೊರಮ, ಕೊರಚ, ಕುಂಚಿ ಕೊರವ, ಕಣಿ ಹೇಳುವ, ಹಚ್ಚೆ ಹಾಕುವ, ಮಂಗಳ ವಾದ್ಯ, ನಾದಸ್ವರ, ಮುಕವೇಣಿ ಬ್ಯಾಂಡ್ ಸಟ್ ಹಾಗೂ ಇತ್ಯಾದಿ ಸಂಗೀತ ಪರಿಕರಗಳನ್ನು ಊದುವ ಮತ್ತು ಬಡಿಯುವ, ಗುಡ್ಡ ಗಾಡು ಹಳ್ಳ ಕೊಳ್ಳದಲ್ಲಿ ಸಿಗುವ ಕಚ್ಚಾ ವಸ್ತುಗಳಾದ ಈಚಲು, ಬಿದಿರು, ಕತ್ತಾಳೆ, ತೆಂಗಿನ ನಾರು ಮೆದೆಹುಲ್ಲು, ಪ್ಲಾಸ್ಟಿಕ್ ವೈರ್, ಸೂಪರ್ ಚೀಲ ಇತ್ಯಾದಿಗಳಿಂದ (ತಟ್ಟಿ, ಪುಟ್ಟಿ, ಏಣಿ, ಚಾಪೆ, ಹಗ್ಗ, ಕಸಪೊರಕೆ, ಮಿಣೆ, ಬಾರಿಕೋಲು, ಪಟ್ಕಣಿ, ನೆಲುವು ಇನ್ನು ಮುಂತಾದ ಗೃಹ ಬಳಕೆಯ ಹಾಗೂ ವ್ಯೆವಸಾಯೋತ್ಪನ್ನ ವಸ್ತುಗಳನ್ನು ತಯಾರಿಸುವ ಜನರು ಕೊರೋನಾ ಕಾರಣದಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ತಲೆಕೂದಲು ಮತ್ತು ಚಿಂದಿ ಹಾಯುವ, ತಲೆ ಕೂದಲುಗಳಿಂದ ಚೌಲಿ ಹೆಣೆಯುವುದು, ಕುಚ್ಚು ಕಟ್ಟುವ, ಹಂದಿ ಸಾಕಾಣಿಕೆ ಮತ್ತು ಬೇಟೆಯಾಡಲು ಹಲವು ರೀತಿಯ ಬಲೆಗಳನ್ನು ಹೆಣೆಯುವ, ಸ್ಟೇಷನರಿ ಸಾಮಾನು ಹಾಗೂ ಮಕ್ಕಳ ಆಟಿಕೆ ವಸ್ತುಗಳನ್ನು, ತಲೆಮೇಲೆ ಒತ್ತುಕೊಂಡು ಜಾತ್ರೆ ಸಂತೆ, ಬೀದಿ ಬೀದಿಗಳಲ್ಲಿ, ತಿರುಗಿ ಮಾರಾಟ ಮಾಡುವ, ಕೋಲೆ ಬಸವ, ಮಂಗ, ಕರಡಿ, ಹಾವಾಡಿಸುವ ಮತ್ತು ಭಿಕ್ಷಾಟನೆ ಮಾಡುವ, ನಗರಗಳಲ್ಲಿರುವ ಸಿರಿವಂತರ ಮನೆಗಳಲ್ಲಿ ಮುಸುರೆ ತಿಕ್ಕುವ, ಕೂಲಿ ಕಾರ್ಮಿಕ, ಪಾತ್ರೆ, ಬಟ್ಟೆ, ಬೆರ್ಸಿಟ್ಟ್, ಕಡ್ಡಿ ಚಾಪೆ, ಕಬ್ಬಿಣದ ಮಂಚ, ಮಾಪು ನೀಲಿ, ಫೆನಾಯಿಲ್, ಮಂಡಕ್ಕಿ ಇತ್ಯಾದಿಗಳನ್ನು ಬೀದಿಬದಿಗಳಲ್ಲಿ ಹಳ್ಳಿಗಲ್ಲಿಗಳಲ್ಲಿ ಸಿಟಿ ಊರೂರು ಅಲೆದು ಜೀವನನೆಡೆಸುವ, ಇಂಥ ಅಸಂಘಟಿತ ವರ್ಗಗಳ ಸಮುದಾಯಗಳ ಬಡ ಜನಗಳಿಗೆ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ದವಸ ಧಾನ್ಯಗಳನ್ನು ವಿತರಿಸುವ ಮೂಲಕ ಮಾನವೀಯತೆ ಮರೆದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸುಡುಗಾಡು ಸಿದ್ಧರ ಯುವ ಮುಖಂಡ ಶಿವರಾಜ್, ಭೋವಿ ಸಂಘದ ಕಾರ್ಯದರ್ಶಿ ಲಕ್ಷ್ಮಣ್, ಭೋವಿ ಗುರುಪೀಠದ ಕಾರ್ಯ ನಿರ್ವಹಣಾಧಿಕಾರಿ ಗೌನಹಳ್ಳಿ ಗೋವಿಂದಪ್ಪ, ಎರೇಹಳ್ಳಿ ರಾಜಣ್ಣ, ಕುರುಬರಹಟ್ಟಿ ತಿಮ್ಮೆಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss