Friday, July 1, 2022

Latest Posts

ಶ್ರೀ ದತ್ತಾತ್ರೇಯ ಪೀಠದಲ್ಲಿ ಹಿಂದೂ ಅರ್ಚಕರ ನೇಮಿಸಿ, ತ್ರಿಕಾಲ ಪೂಜೆ ವ್ಯವಸ್ಥೆಗೆ ಒತ್ತಾಯ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಚಂದ್ರದ್ರೋಣ ಪರ್ವತದಲ್ಲಿರುವ ಪವಿತ್ರವಾದ ಶ್ರೀ ದತ್ತಾತ್ರೇಯ ಪೀಠದಲ್ಲಿ ಹಿಂದೂ ಅರ್ಚಕರನ್ನು ನೇಮಿಸಿ ತ್ರಿಕಾಲ ಪೂಜೆಗೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ವಿಶ್ವಹಿದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಡಿ.ಸಿ. ಡಾ.ಎಸ್.ಬಗಾದಿ ಗೌತಮ್ ಅವರನ್ನು ಭೇಟಿ ಮಾಡಿದ ಕಾರ್ಯಕರ್ತರು ದತ್ತಾತ್ರೇಯರ ಪಾದುಕೆಗಳಿರುವ ಗುಹಾಂತರ ದೇವಾಲಯ ಇತಿಹಾಸ ಪ್ರಸಿದ್ಧವಾಗಿದ್ದು, ಪೌರಾಣಿಕ ಹಿನ್ನೆಲೆಯುಳ್ಳದ್ದಾಗಿದೆ. ಸಮಸ್ತ ಹಿಂದೂ ಸಮಾಜದ ಭಕ್ತಿಯ ಕೇಂದ್ರವೂ ಆಗಿದ್ದು ದತ್ತಾತ್ರೇಯ ಪೀಠವೆಂದೇ ಪ್ರಸಿದ್ಧಿ ಪಡೆದಿದ್ದರೂ ಇಲ್ಲಿ ಹಿಂದೂ ಪದ್ಧತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯದ ಕಾರಣ ಸಮಾಜದ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂದು ತಿಳಿಸಿದರು.
ಇದು ಸಂಪೂರ್ಣ ಹಿಂದೂ ದೇವಾಲಯವಾಗಿದ್ದು, ರಾಜ್ಯ ಸರ್ಕಾರದ ಮುಜುರಾಯಿ ಇಲಾಖೆಯ ವ್ಯವಸ್ಥೆಗೆ ಒಳಪಟ್ಟಿದೆ. ಅಧಿಕೃತ ದಾಖಲೆಗಳು ಸಹ ಇದು ಇನಾಂ ದತ್ತಾತ್ರೇಯ ಪೀಠ ಎಂದೇ ಉಲ್ಲೇಖಿಸಿವೆ. ಆದರೂ ಇಲ್ಲಿ ಹಿಂದೂ ಆಚರಣೆಗಳಿಗೆ ಅವಕಾಶ ನೀಡದಿರುವುದು ಸರಿಯಲ್ಲ ಎಂದರು.
ಹಿಂದೂ ಪೂಜಾ ಆಚರಣೆಗಳನ್ನು ಒಪ್ಪದ ಹಾಗೂ ಪೀಠದ ಬಗ್ಗೆ ನಂಬಿಕೆಯೇ ಇಲ್ಲದ ಮುಜಾರವರ್‍ರನ್ನು ಇಲ್ಲಿ ನೇಮಿಸಿರುವುದು ಸಮಸ್ತ ಹಿಂದೂಗಳ ಭಕ್ತಿ, ಶ್ರದ್ಧೆ, ಹಾಗೂ ಭಾವನೆಗಳಿಗೆ ತೀವ್ರವಾದ ಆಘಾತ ತರುವ ವಿಷಯವಾಗಿದೆ ಎಂದು ತಿಳಿಸಿದ್ದಾರೆ.
ಇದು ದತ್ತಾತ್ರೇಯರು ತಪಸ್ಸು ಮಾಡಿದ ಸ್ಥಳ, ಅಲ್ಲಿ ದತ್ತಾತ್ರೇಯರ ಮೂರ್ತಿ ಪ್ರತಿಷ್ಠಾಪನೆ ಆಗಬೇಕು, ಹಿಂದೂ ಪದ್ಧತಿಯಲ್ಲಿ ತ್ರಿಕಾಲ ಪೂಜೆ ನಡೆಸಲು ಅವಕಾಶ ನೀಡಬೇಕು. ಅಲ್ಲಿರುವ ಮುಜಾವರ್‍ರನ್ನು ಹೊರಕ್ಕೆ ಕಳಿಸಿ ಬೇರೆ ವ್ಯವಸ್ಥೆ ಮಾಡಬೇಕು, ದತ್ತಪೀಠದ ಆವರಣದಲ್ಲಿರುವ ಎಲ್ಲ ಗೋರಿಗಳನ್ನು ತೆರವುಗೊಳಿಸಿ ಅಲ್ಲಿ ಸಂಪೂರ್ಣವಾಗಿ ಹಿಂದೂ ಪದ್ಧತಿ ಆಚರಣೆಗಳು ಆಗಬೇಕು ಎಂದು ಆಗ್ರಹಿಸಿದರು.
ಅಲ್ಲಿಗೆ ಬರುವ ಭಕ್ತರಿಗೆ ಪಾದುಕೆ, ಪೂಜೆ-ಪುನಸ್ಕಾರ, ಆರತಿ ಯಾವುದೂ ದೊರಕದೆ, ಮನನೊಂದು ಅಪಮಾನಿತರಾಗಿ ಹಿಂತಿರುಗುವ ಪರಿಸ್ಥಿತಿ ಪ್ರತಿನಿತ್ಯ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಡಿ.29 ರೊಳಗಾಗಿ ಶ್ರೀ ಗುರು ದತ್ತಾತ್ರೇಯರ ಪೀಠದ ಗುಹಾಂತರ ದೇವಾಲಯದ ಶ್ರೀಗುರು ದತ್ತಾತ್ರೇಯರ ಪಾದುಕೆಗಳಿಗೆ ತ್ರಿಕಾಲ ಪೂಜಾ ಕಾರ್ಯಗಳು ಹಿಂದೂ ಪದ್ಧತಿ, ಪರಂಪರೆ ಹಾಗು ಶ್ರದ್ಧಾ ಭಕ್ತಿಗಳಿಗೆ ಅನುಗುಣವಾಗಿ ನಡೆಯುವಂತೆ ಹಿಂದೂ ಅರ್ಚಕರನ್ನು ನೇಮಿಸಬೇಕು ಎಂದು ಮನವಿ ಮಾಡಿದರು.
ವಿಶ್ವಹಿಂದೂ ಪರಿಷತ್-ಬಜರಂಗದಳದ ದಕ್ಷಿಣ ಪ್ರಾಂತ್ಯ ಅಖಾಡ ಪ್ರಮುಖ್ ರಂಗನಾಥ್, ಅಮಿತ್, ಶ್ಯಾಂ, ಎಂಜಿ ರೋಡ್ ಮಂಜು, ಸುನೀಲ್, ಕೃಷ್ಣ ಇತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss