ಮೈಸೂರು: ಮೈಸೂರು ಸಂಸ್ಥಾನವನ್ನು ಆಳಿದ ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆಯನ್ನು ಕರ್ನಾಟಕ ಸೇನಾ ಪಡೆ ವತಿಯಿಂದ ಬುಧವಾರ ನಗರದಲ್ಲಿ ಸರಳವಾಗಿ ಆಚರಿಸಿ ಸಿಹಿ ಹಂಚಲಾಯಿತು.
ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ನಾಲ್ವಡಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸಾರ್ವಜನಿಕರಿಗೆ ಮೈಸೂರು ಪಾಕ್ ಸಿಹಿಯನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಪಪೊಲೀಸ್ ಆಯುಕ್ತ ಡಾ.ಎ.ಎನ್.ಪ್ರಕಾಶ್ ಗೌಡ, ಮೈಸೂರು ರಾಜಮನೆತನಕ್ಕೆ ನಾವೆಲ್ಲರೂ ಚಿರುಋಣಿಯಾಗಿರಬೇಕು. ರಾಜಮನೆತನದವರು ಕನ್ನಡ ನಾಡಿನ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಮೈಸೂರು ಇಷ್ಟು ಸುಂದರವಾಗಿ ಸ್ವಚ್ಛನಗರ ಎಂದೆನ್ನಿಸಿಕೊಳ್ಳುವುದಕ್ಕೆ ರಾಜಮನೆತನದ ಕಾಣಿಕೆಯೇ ಬಹುಮುಖ್ಯ ಕಾರಣ.
ಕೆಆರ್ ಎಸ್ ಜಲಾಶಯ ನಿರ್ಮಿಸಿ, ವಿದ್ಯಾಭ್ಯಾಸ ಯೋಜನೆಯಡಿ ಶಾಲಾ ಕಾಲೇಜುಗಳನ್ನು ತೆರೆದದ್ದು, ನೀರಾವರಿ ಯೋಜನೆ, ಮೀಸಲಾತಿ ಯೋಜನೆ, ಬ್ಯಾಂಕ್, ಕೈಗಾರಿಕಾಗಳನ್ನು ತೆರೆದರು. ಸಾಕಷ್ಟು ಅಭಿವೃದ್ಧಿಶೀಲ ಚಿಂತನೆಗಳ ಮೂಲಕ ಮೈಸೂರು, ಸುತ್ತಮುತ್ತಲಿನ ಜಿಲ್ಲೆಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದಕ್ಕೆ ಶ್ರಮಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ರ ಉದಾತ ಚಿಂತನಾಶೀಲತೆ ನಮ್ಮೆಲ್ಲರೂ ಮೂಡಲಿ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಎಂ.ಎನ್.ದೊರೆಸ್ವಾಮಿ ಇತರರು ಉಪಸ್ಥಿತರಿದ್ದರು.