ಹೊಸ ದಿಗಂತ ವರದಿ, ಹುಬ್ಬಳ್ಳಿ:
ಅಯೋದ್ಯೆಯ ಶ್ರೀರಾಮಜನ್ಮಭೂಮಿ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಮರ್ಪಣಾ ಮಹಾ ಅಭಿಯಾನದ ಕರ್ನಾಟಕ ಉತ್ತರ ಪ್ರಾಂತದ ಕಾರ್ಯಾಲಯದ ಉದ್ಘಾಟನೆ ಇಂದು ಪೂಜ್ಯ ಶ್ರೀ ಬಸವಲಿಂಗ ಸ್ವಾಮಿಗಳು-ರುದ್ರಾಕ್ಷಿಮಠ ಇವರ ದಿವ್ಯ ಸಾನಿಧ್ಯದಲ್ಲಿ ಜರುಗಿತು.
ಮಹಾಅಭಿಯಾನದ ಕಾರ್ಯಾಲಯವಾಗಿ ಪರಿವರ್ತಿಸಲಾಗಿರುವ ಇಲ್ಲಿಯ ಭವಾನಿ ನಗರದಲ್ಲಿನ ಹೆಬಸೂರ್ ಅವರ ನಿವಾಸದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಆರೆಸ್ಸೆಸ್ ನ ಹಿರಿಯ ಪ್ರಚಾರಕ ಸು.ರಾಮಣ್ಣ, ಶ್ರೀರಾಮಜನ್ಮಭೂಮಿ ಮಂದಿರದ ನಿರ್ಮಾಣ ಭವ್ಯವಾಗಿ ದಿವ್ಯವಾಗಿ ನೆರವೇರಲು ಪ್ರತಿಯೊಬ್ಬ ಭಾರತೀಯನು ಈ ಕಾರ್ಯಕ್ಕೆ ಕೈ ಜೋಡಿಸಬೇಕು. ಶತಮಾನಗಳ ಹೋರಾಟದ ಫಲವಾಗಿ ಇಂದು ಹಿಂದುಗಳ ಕನಸು ನೆನಸಾಗುತ್ತಿದೆ. ನಾವು ಈ ಐತಿಹಾಸಿಕ ಕ್ಷಣದಲ್ಲಿ ಭಾಗಿಯಾಗಬೇಕೆಂದು ಹೇಳಿದರು.
ಸಾನಿಧ್ಯವಹಿಸಿ ಮಾತನಾಡಿದ ಪೂಜ್ಯ ಶ್ರೀ ಬಸವಲಿಂಗಸ್ವಾಮಿಗಳು, ಸರದಾರ ಪಟೇಲರ ನೇತ್ರತ್ವದಲ್ಲಿ ಹೇಗೆ ಸೋಮನಾಥ ಮಂದಿರದ ಪುನರನಿರ್ಮಾಣವಾಯಿತೋ ಹಾಗೆ ನರೇಂದ್ರ ಮೋದಿಯವರ ಕಾಲದಲ್ಲಿ ಆಯೋದ್ಯೆಯ ಶ್ರೀರಾಮ ಮಂದಿರ ಪುನರನಿರ್ಮಾಣವಾಗುತ್ತಿದೆ. ದಿವಂಗತ ಅಶೋಕ ಸಿಂಘಲ್ ಅವರಂತಹ ಮಹಾನ ವ್ಯಕ್ತಿಗಳ ಸಂಕಲ್ಪದಿಂದ ಇದು ನೆನಸಾಗುತ್ತಿದೆ. ನಾವೆಲ್ಲರೂ ಕೂಡ ಈ ಮಹಾನ ಕಾರ್ಯದಲ್ಲಿ ಶಿಸ್ತುಬದ್ಧವಾಗಿ ಕಾರ್ಯ ಮಾಡುತ್ತ ಮಂದಿರದ ನಿರ್ಮಾಣ ಕಾರ್ಯ ಸಾಕಾರಗೊಳಿಸಬೇಕೆಂದು ನುಡಿದರು.
ಪ್ರಾಂತ ಸಂಘಚಾಲಕ ಡಾ. ಖಗೇಶನ್ ಪಟ್ಟಣಶೆಟ್ಟಿ, ವಿ.ಎಚ್.ಪಿ ಪ್ರಾಂತ ಅಧ್ಯಕ್ಷ ಡಾ. ಎಸ್.ಆರ್. ರಾಮನಗೌಡರ್, ಅಭಿಯಾನದ ಪ್ರಾಂತ ಸಂಯೋಜಕ ಕೃಷ್ಣಾ ಜೋಶಿ. ಬಸವರಾಜ್ ಹೆಬಸೂರ ದಂಪತಿಗಳು, ಗೋವರ್ಧನರಾವ್, ಶ್ರೀಧರ ನಾಡಗೀರ ಮುಂತಾದವರು ಉಪಸ್ಥಿತರಿದ್ದರು.
ವಿನಾಯಕ ತಲಗೇರಿ ಸ್ವಾಗತಿಸಿ ವಂದಿಸಿದರು.
ಸಂಪರ್ಕ: +91 9480397682