Monday, July 4, 2022

Latest Posts

ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಜಿಲ್ಲಾ ಕಾರ್ಯಾಲಯ ಉದ್ಘಾಟನೆ

ಹೊಸ ದಿಗಂತ ವರದಿ, ಹಾವೇರಿ: 

ಪ್ರಭು ಶ್ರೀರಾಮ ಅನುಕರಣೀಯ ವ್ಯಕ್ತಿ. ಮಹಾ ಪುರುಷನ ಜನ್ಮ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕಾಗಿ ಹೋರಾಟ ಮಾಡಿದವರು ಹಾಗೂ ಜೀವ ಕಳೆದುಕೊಂಡವರು ಎಷ್ಟು ಶ್ರೇಷ್ಠರೋ ಮಂದಿರ ನಿರ್ಮಾಣದಲ್ಲಿ ತೊಡಗಿಕೊಳ್ಳುವವರು ಅಷ್ಟೇ ಶ್ರೇಷ್ಠರು ಎಂದು ನೆಗಳೂರು ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶನಿವಾರ ನಗರದ ಎಚ್.ಡಿ.ಎಫ್.ಸಿ ಬ್ಯಾಂಕಿನ ಮೇಲೆ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಜಿಲ್ಲಾ ಕಾರ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತ್ಯಾಗದ ಸಂಕೇತವಾದ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕಾಗಿ ಇಷ್ಟು ವರ್ಷ ಸಂಘರ್ಷ ಮಾಡಬೇಕಾಗಿಬಂದಿದ್ದು ನಮ್ಮ ದೌರ್ಭಾಗ್ಯ. ಇಂದು ದೇಶದ ಬಹು ಸಂಖ್ಯಾತರ ಆಶಯ ಈಡೇರುತ್ತಿರುವುದು ಸಂತಸದ ವಿಷಯ. ಹಿಂದೂ ಸಮಾಜವನ್ನು ಗಟ್ಟಿಗೊಳಿಸುವಲ್ಲಿ ಸತತವಾಗಿ ಶ್ರಮಿಸುತ್ತಿರುವ ಸಂಘ ಹಾಗೂ ಸಂಘದ ಅನೇಕ ಸಂಘಟನೆಗಳು ಭಾರತವನ್ನು ಸದೃಡಗೊಳಿಸುವ ಕಾರ್ಯ ಮಾಡುತ್ತಿವೆ. ಸಂಘಟನೆಯ ಒಬ್ಬ್ಬ ಕಾರ್ಯಕರ್ತ ನೂರು ಜನರ ಶಕ್ತಿ ಇದ್ದಂತೆ ಎಂದರು.
ವಿಶ್ವ ಹಿಂದು ಪರಿಷತ್ ನಿಧಿ ಸಮರ್ಪಣಾ ಅಭಿಯಾನವನ್ನು ಕೈಗೆತ್ತಿಕೊಂಡಿರುವುದು ಭೀಮ ಬಲ ಬಂದಂತಾಗಿದೆ. ವಿಶ್ವಾಸರ್ಹ ಸಂಘಟನೆಯ ಕಾರ್ಯಕರ್ತರು ಮಂದಿರ ನಿರ್ಮಾಣಕ್ಕಾಗಿ ಹಣ ಸಮರ್ಪಣೆ ಹೊಣೆಯನ್ನು ಹೊತ್ತು ಸಮಸ್ತ ಹಿಂದೂಗಳ ಮನೆ ಬಾಗಿಲಿಗೆ ಬರಲಿದ್ದು ಈ ಮಾಹಾನ್ ಕಾರ್ಯಕ್ಕೆ ಎಲ್ಲರು ಸಮರ್ಪಣಾ ಭಾವದಿಂದ ಕೈ ಜೋಡಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಘಚಾಲಕ ಈಶ್ವರ ಹಾವನೂರ, ನಿಧಿ ಸಮರ್ಪಣಾ ಅಭಿಯಾನದ ಜಿಲ್ಲಾ ಪ್ರಮುಖ ರಾಜು ಹೈಬತ್ತಿ, ಸಹ ಪ್ರಮುಖ ಪದ್ಮನಾಭ ಕುಲಕರ್ಣಿ, ಪ್ರದೀಪ ಮುಳ್ಳೂರ, ಎಸ್.ಆರ್.ಹೆಗಡೆ ಹಾಗೂ ಜಿಲ್ಲಾ ಸ್ತರದ ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss