Wednesday, August 10, 2022

Latest Posts

ಸಂಕಷ್ಟದ ಕಾಲಕ್ಕೆ ಸ್ಪಂದಿಸಿ ಬದುಕಿಗೆ ಆಧಾರವಾದಿರಿ: ರೈತ ಮಹಿಳೆ ವಸಂತಕುಮಾರಿ ಬಣ್ಣನೆ

ಚಿತ್ರದುರ್ಗ: ಸಮಸ್ಯೆಗಳ ವರ್ಷದಲ್ಲಿ ಸಮಗ್ರ ಆಡಳಿತ ನೀಡಿದ್ದೀರಿ, ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ನಮ್ಮಂತಹ ಬಡ ರೈತರಿಗೆ ಸ್ಪಂದಿಸಿ, ನಮ್ಮ ಬದುಕಿಗೆ ಆಶಾಕಿರಣವಾದಿರಿ. ಈ ಮೂಲಕ ’ನೀವು ರೈತ ನಾಯಕ ಎಂಬುದನ್ನು ಸಾಬೀತು ಮಾಡಿದ್ದೀರಿ’ ಎಂದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕಾಟನಾಯಕನಹಳ್ಳಿ ಗ್ರಾಮದ ರೈತ ಮಹಿಳೆ ವಸಂತಕುಮಾರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಡಿಯೋ ಸಂವಾದದಲ್ಲಿ ಕೃತಜ್ಞತೆಯ ನುಡಿಗಳಿವು.
ರೈತ ಮಹಿಳೆ ವಸಂತಕುಮಾರಿ ಸಲ್ಲಿಸಿದ ಧನ್ಯವಾದಕ್ಕೆ ಪ್ರತಿಯಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ’ಮಳೆ ಚೆನ್ನಾಗಿ ಬಂದಿದೆಯೇ, ಬಿತ್ತನೆ ಆಗಿದೆಯೇ’ ಎಂದು ಕೃಷಿ ಚಟುವಟಿಕೆ ಬಗ್ಗೆ ವಿಚಾರಿಸಿದರು. ಮುಂದಿನ ದಿನಗಳಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಸರ್ಕಾರ ಆದ್ಯತೆ ನೀಡಲಿದೆ ಎಂದು ಭರವಸೆ ನೀಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಒಂದು ವರ್ಷ ಪೂರೈಸಿದ ಅಂಗವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳೊಂದಿಗೆ ಏಕಕಾಲದಲ್ಲಿ ವೀಡಿಯೋ ಸಂವಾದದ ಮೂಲಕ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸರ್ಕಾರದ ಒಂದು ವರ್ಷದ ಸಾಧನೆ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ನಡೆದ ನೇರ ವಿಡಿಯೋ ಸಂವಾದವಿದು.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕಾಟನಾಯಕನಹಳ್ಳಿ ಗ್ರಾಮದ ವಸಂತಕುಮಾರಿ ಮಾತನಾಡಿ, ಸಮಸ್ಯೆಗಳ ವರ್ಷದಲ್ಲಿ ಸಮಗ್ರ ಆಡಳಿತ ನೀಡಿದ್ದೀರಿ. ’ಸಾಲ ಮಾಡಿ ಬಂಡವಾಳ ಹಾಕಿ ಈರುಳ್ಳಿ ಬೆಳೆದಿದ್ದ ಬಡ ರೈತ ಕುಟುಂಬದವರಾದ ನಾವು, ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಜಾರಿಗೊಳಿಸಿದ ಲಾಕ್‌ಡೌನ್ ಪರಿಣಾಮವಾಗಿ ಈರುಳ್ಳಿಗೆ ಸೂಕ್ತ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದೆವು.
ಸಾಮಾಜಿಕ ಜಾಲತಾಣದಲ್ಲಿ ತೋಡಿಕೊಂಡಿದ್ದ ನಮ್ಮ ಸಂಕಷ್ಟದ ಮನವಿಗೆ ತಕ್ಷಣವೇ ಸ್ಪಂದಿಸಿ, ತಾವೇ ಖುದ್ದು ಕರೆ ಮಾಡಿ ನಮಗೆ ಧೈರ್ಯ ತುಂಬಿದ್ದಲ್ಲದೆ, ತೋಟಗಾರಿಕೆ ಇಲಾಖೆ ಮೂಲಕ ನಮಗೆ ಈರುಳ್ಳಿಗೆ ಉತ್ತಮ ಬೆಲೆ ದೊರಕಿಸಿಕೊಟ್ಟು, ನಮ್ಮ ಬದುಕಿಗೆ ಆಶಾಕಿರಣವಾದಿರಿ, ಈ ಮೂಲಕ ’ಯಡಿಯೂರಪ್ಪನವರು ರೈತ ನಾಯಕ ಎಂಬುದನ್ನು ನೀವು ಸಾಬೀತು ಮಾಡಿದ್ದೀರಿ ಎಂದು ಬಣ್ಣಿಸಿದರು.
ಬೆಳೆ ಪರಿಹಾರಗಳನ್ನು ಸದ್ಯ ಬಿಡುಗಡೆ ಮಾಡಲಾಗಿದೆ. ಆದಷ್ಟು ಬೇಗ ಎಲ್ಲ ರೈತರಿಗೆ ಬೆಳೆ ಪರಿಹಾರ ತಲುಪಬೇಕು. ಹಿರಿಯೂರಿನ ಶಾಸಕರೊಂದಿಗೆ ಚರ್ಚಿಸಿ ಇಲ್ಲಿನ ನೀರಾವರಿ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಜಿ.ಪಂ. ಸಭಾಂಗಣದಲ್ಲಿ ’ಸವಾಲುಗಳ ಒಂದು ವರ್ಷ- ಪರಿಹಾರದ ಸ್ಪರ್ಶ’ ಕಿರುಹೊತ್ತಿಗೆ ಹಾಗೂ ಜನಪದ ಮತ್ತು ಮಾರ್ಚ್‌ಆಪ್ ಕರ್ನಾಟಕ ವಿಶೇಷ ಸಂಚಿಕೆ ಯನ್ನು ಶಾಸಕರುಗಳಾದ ಜಿ.ಹೆಚ್. ತಿಪ್ಪಾರೆಡ್ಡಿ ಮತ್ತು ಪೂರ್ಣಿಮಾ ಶ್ರೀನಿವಾಸ್ ಬಿಡುಗಡೆಗೊಳಿಸಿದರು. ಜಿ.ಪಂ. ಸಿಇಒ ಟಿ. ಯೋಗೇಶ್, ಜಿಲ್ಲಾ ರಕ್ಷಣಾಧಿಕಾರಿ ರಾಧಿಕಾ, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಜಿ. ನಂದಗಾವಿ, ಉಪವಿಭಾಗಾಧಿಕಾರಿ ಪ್ರಸನ್ನ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಜಿಲ್ಲಾ ವಾರ್ತಾಧಿಕಾರಿ ಧನಂಜಯಪ್ಪ ಸ್ವಾಗತಿಸಿದರು. ಜಿಲ್ಲೆಯ ವಿವಿಧ ಇಲಾಖೆಗಳ ಮೂಲಕ ಸೌಲಭ್ಯ ಪಡೆದ ಹಲವು ಯೋಜನೆಗಳ ಫಲಾನುಭವಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss