ಮೈಸೂರು: ಬೆಳಗಾವಿಯಲ್ಲಿ ತೆರವುಗೊಳಿಸಲಾಗಿರುವ ಜಾಗದಲ್ಲಿಯೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಪ್ರತಿಮೆಯನ್ನು ಪುನರ್ ಸ್ಥಾಪಿಸಬೇಕು, ಪ್ರತಿಮೆ ತೆರವುಗೊಳಿಸಿ ಅಪಮಾನ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳು ಬುಧವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದವು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕರ್ನಾಟಕ ಪ್ರದೇಶ ಕುರುಬರ ಸಂಘ, ದಲಿತ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಕನ್ನಡಪರ ಸಂಘಟನೆಗಳ ಒಕ್ಕೂಟ, ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆಯ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಕೆಲಕಾಲ ಧರಣಿ ನಡೆಸಿ, ನಾನಾ ಘೋಷಣೆಗಳನ್ನು ಕೂಗುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬೆಳಗಾವಿಯಲ್ಲಿ ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ತೆರವುಗೊಳಿಸಿರುವುದಲ್ಲದೇ ಕನ್ನಡ ಪರ ಹೋರಾಟಗಾರರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವುದು ಖಂಡನೀಯ. ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯಕ್ಕಾಗಿ ತನ್ನ ಜೀವವನ್ನೇ ಪಣಕ್ಕಿಟ್ಟರು. ಇಂತಹ ಹೋರಾಟಗಾರರ ಪ್ರತಿಮೆಗೆ ಜಿಲ್ಲಾಡಳಿತ ಅಪಮಾನಗೊಳಿಸಿರುವುದು ಅಕ್ಷಮ್ಯ.
ದೇಶದಲ್ಲಿ ಅಂಬೇಡ್ಕರ್ ಆದಿಯಾಗಿ ಬಹಳಷ್ಟು ಮಹಾನ್ ನಾಯಕರ ಪುತ್ಥಳಿಗೆ ಅಪಮಾನವಾಗುತ್ತಿರುವುದು ವಿಷಾದದ ಸಂಗತಿ. ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆದರೆ ಅದಕ್ಕೆ ನೇರ ಆ ಜಿಲ್ಲಾಡಳಿತ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ ಮಾಡಿ, ಕಾನೂನುಕ್ರಮ ಜರುಗಿಸಬೇಕೆಂದು ಪ್ರತಿಭಟನಾಕಾರರುಯ ಒತ್ತಾಯಿಸಿದರು. ಸಂಗೊಳ್ಳಿ ರಾಯಣ್ಣರ ಪ್ರತಿಮೆಯನ್ನು ಈ ಹಿಂದೆ ಇದ್ದ ಸ್ಥಳದಲ್ಲಿ ಸರ್ಕಾರ ಪ್ರತಿಷ್ಠಾಪನೆಗೊಳಿಸಲು ಕೂಡಲೇ ಕ್ರಮ ವಹಿಸಬೇಕು. ತಪ್ಪಿದಲ್ಲಿ ಇದರ ವಿರುದ್ಧ ಇಡೀ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ. ಕೂಡಲೇ ಸರ್ಕಾರ ಎಚ್ಚೆತ್ತು ಈ ಪ್ರಮಾದವನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಡಾ.ಎನ್ ಎಸ್.ರಂಗರಾಜು, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚAದ್ರಶೇಖರ್, ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಪಿ.ರಾಜು, ಕರ್ನಾಟಕ ಪ್ರದೇಶ ಕುರುಬರ ಸಂಘದ ಕಾರ್ಯಾಧ್ಯಕ್ಷ ಬಿ.ಸುಬ್ರಮಣ್ಯ, ಕರಾಹಿಂವಜಾವೇ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು, ಸಾಹಿತಿಗಳಾದ ಪ್ರೊ.ಮಹೇಶ್ಚಂದ್ರಗುರು, ಪ್ರೊ.ಕಾಳೇಗೌಡ ನಾಗವಾರ ಸೇರಿದಂತೆ ಹಲವರು ಮಂದಿ ಭಾಗವಹಿಸಿದ್ದರು.