Thursday, June 30, 2022

Latest Posts

ಸಂಘಟನೆಯ ಗೌರವ, ಪಕ್ಷದ ಸಿದ್ಧಾಂತ ಎತ್ತಿ ಹಿಡಿಯುವವರಿಗೆ ಗ್ರಾಪಂ ಚುನಾವಣಾ ಟಿಕೆಟ್: ಸಂಸದ ರಾಘವೇಂದ್ರ

ಹೊಸ ದಿಗಂತ ವರದಿ, ಶಿವಮೊಗ್ಗ:

ಗೆಲುವಿಗೆ ನಾಲ್ಕು ವೋಟು ಕಡಿಮೆ ತೆಗೆದುಕೊಂಡರೂ ಪರವಾಗಿಲ್ಲ. ಸಂಘಟನೆಯ ಗೌರವ, ಪಕ್ಷದ ಸಿದ್ಧಾಂತ ಎತ್ತಿ ಹಿಡಿಯುವವರಿಗೆ ಮಾತ್ರ ಗ್ರಾಪಂ ಚುನಾವಣಾ ಟಿಕೆಟ್ ನೀಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ನಗರದ ಪೆಸಿಟ್ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕರು, ಸಂಸದರಾದ ನಾವು ಗ್ರಾಪಂ ಮಟ್ಟದಲ್ಲಿ ಗೆದ್ದವರಿಗೆ ಸ್ವಾಗತ ಮಾಡಿಕೊಂಡು ಬಂದಿದ್ದೇವೆ. ಇನ್ನು ಮುಂದೆ ಹಾಗೆ ಮಾಡಬಾರದು. ಗ್ರಾಮ ಮಟ್ಟದಲ್ಲಿ ತಳಹದಿ ಗಟ್ಟಿಗೊಳಿಸಲು ಶ್ರಮ ಹಾಕುವಂತಿರಬೇಕು. ಗ್ರಾಪಂ ಚುನಾವಣೆ ನಿಜವಾದ ಪ್ರಜಾಪ್ರಭುತ್ವದ ಶಕ್ತಿ. ಈ ಬಾರಿ ಗೆದ್ದವರಿಗೆ ಹಾರ ಹಾಕುವ ಪರಂಪರೆ ಇರಬಾರದು ಎಂದರು.
ರಾಜಕಾರಣದಲ್ಲಿ 49 ಬಂದರೆ ಸೊನ್ನೆ, 51 ಎಂದರೆ 100 ಎಂದರ್ಥ. 51 ಆದಲ್ಲಿ ಮಾತ್ರ ಆಡಳಿತ ಹಿಡಿಯಬಹುದು. ಹಾಗಾಗಿ ರಾಷ್ಟ್ರೀಯತೆ ವಿಚಾರ, ಪಕ್ಷದ ಸಿದ್ಧಾಂತದ ಜೊತೆಗೆ ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರಿಗೆ ಶಾಶ್ವತ ಜೀವನ ಕೊಡುವ ಕಾರ್ಯಕ್ರಮಗಳನ್ನು ರೂಪಿಸಿವೆ. ಅದನ್ನು ಜನರಿಗೆ ಮುಟ್ಟಿಸಿದರೆ ಚುನಾವಣೆಯಲ್ಲಿ ಯಶಸ್ಸನ್ನು ಕಾಣುತ್ತೇವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದ ಸಮಾವೇಶದಲ್ಲಿ ಪ್ರಮುಖರಾದ ಭಾರತಿಶೆಟ್ಟಿ, ಅಶೋಕ ನಾಯ್ಕ, ಆರ್.ಕೆ.ಸಿದ್ದರಾಮಣ್ಣ, ಭಾನುಪ್ರಕಾಶ್, ತುಳಸಿಮುನಿರಾಜು ಗೌಡ, ವಿವೇಕಾನಂದ ಡಬ್ಬಿನ್, ಪವಿತ್ರ ರಾಮಯ್ಯ, ಸಂದೇಶ ಜವಳಿ, ಗಣೇಶ ರಾವ್, ಬಾಳೆಬೈಲು ರಾಘವೇಂದ್ರ, ಎನ್.ಕೆ.ಜಗದೀಶ, ಡಿ.ಎಸ್.ಅರುಣ್, ಎಸ್.ಎಸ್.ಜ್ಯೋತಿಪ್ರಕಾಶ್, ಗೀತಾ ಜಯಶೇಖರ್, ರತ್ನಾಕರ ಶೆಣೈ ಇನ್ನಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss