ಧಾರವಾಡ: ರಾಜ್ಯದಲ್ಲಿ ಸಂಘಟಿತ ಹಾಗೂ ವಲಸೆ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮ ಆಯೋಜಿಸುತ್ತಿದೆ. ಕ್ಷೌರಿಕ, ಮಡಿವಾಳ, ಟೇಲರ್ ವೃತ್ತಿಯ ಅಸಂಘಟಿತ ಕಾರ್ಮಿಕರ ಸಮೀಕ್ಷೆ ಮಾಡಿ ದತ್ತಾಂಶ ಸಂಗ್ರಹಿಸಲು ಕಾರ್ಮಿಕ ಇಲಾಖೆ ನಿರ್ಧರಿಸಿದೆ. ರಾಜ್ಯದ ಅಸಂಘಟಿತ ಕಾರ್ಮಿಕರ ಭದ್ರತೆಗೆ ಪ್ರತ್ಯೇಕ ಕಾನೂನು ರಚಿಸುವುದಾಗಿ ಕಾರ್ಮಿಕ-ಸಕ್ಕರೆ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನೆ ಹಾಗೂ ಇಲಾಖೆ ಫಲಾನುಭವಿಗಳಿಗೆ ಪರಿಹಾರ ಚೆಕ್ ವಿತರಿಸಿದ ಅವರು, ಕಾರ್ಮಿಕ ಇಲಾಖೆ ಕಾರ್ಮಿಕ ಮತ್ತು ಮಾಲೀಕರ ಮಧ್ಯೆ ಸೇತುವೆಯಾಗಿದೆ. ಕೋವಿಡ್ನಿಂದ ಕಾರ್ಮಿಕರಿಗೆ ಹಾಗೂ ಉದ್ಯಮಕ್ಕೆ ಅನೇಕ ಪಾಠಗಳನ್ನು ಕಲಿಸಿದೆ. ಕಾರ್ಮಿಕರ ಶ್ರಮದಿಂದಾಗಿ ದೇಶದ ಅಭಿವೃದ್ಧಿಗೆ ವೇಗ ಸಿಕ್ಕಿದೆ ಎಂದರು.
ಕಾರ್ಮಿಕರ ಹಿತ ರಕ್ಷಣೆಗೆ ವಿವಿಧ ಕಾನೂನುಗಳು ಅಸ್ತೀತ್ವದಲ್ಲಿದ್ದರೂ, ಉದ್ಯೋಗ ಕಡಿತ ಹಾಗೂ ಉತ್ಪಾದನೆಗಳ ಸ್ಥಗಿತದ ಹಿನ್ನೆಲೆ ಇಲಾಖೆಯು ಮಾನವೀಯತೆಯಡಿ ಸಮನ್ವಯತೆಯಿಂದ ಕೆಲಸ ಮಾಡುತ್ತಿದೆ. ಇತ್ತಿಚಿಗೆ ಅಸ್ತೀತ್ವಕ್ಕೆ ಬಂದಿರುವ ಹೊಸ ಕೈಗಾರಿಕಾ ನೀತಿಯು ಕಾರ್ಮಿಕ ವರ್ಗಕ್ಕೆ ಪೂರಕವಾಗಿದೆ. ಸರ್ಕಾರವು ಕಾರ್ಮಿಕ ಸ್ನೇಹಿ ವಾತಾವರಣಕ್ಕೆ ಒತ್ತು ಕೊಟ್ಟು ಕಾರ್ಯ ಮಾಡುತ್ತಿದೆ ಎಂದರು.
ತಮಿಳುನಾಡು, ಕೇರಳ ಸೇರಿ ವಿವಿಧ ರಾಜ್ಯಗಳಲ್ಲಿ ಕಾರ್ಮಿಕ ಇಲಾಖೆಗಳು ಹಮ್ಮಿಕೊಂಡ ಕಾರ್ಮಿಕ ಸ್ನೇಹಿ ಕಾರ್ಯಕ್ರಮಗಳು, ವಿವಿಧ ಕಲ್ಯಾಣ ಮಂಡಳಿಗಳು ನಿರ್ವಹಿಸುವ ಕಾರ್ಯ, ಯೋಜನೆಗಳ ಅಧ್ಯಯನಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ನೇಮಿಸಿದೆ. ಅವರು ವರದಿ ಆಧರಿಸಿ ಇತರ ರಾಜ್ಯಗಳ ಕಾರ್ಮಿಕ ಕಲ್ಯಾಣ ಮಾದರಿಗಳನ್ನು ರಾಜ್ಯದಲ್ಲಿ ಅನುಷ್ಠಾನಿಸುವುದಾಗಿ ಭರವಸೆ ನೀಡಿದರು.
ಸೆ.೧ರಿಂದ ಪೂರ್ವ ಪ್ರಾಥಮಿಕ-ಮಾಧ್ಯಮಿಕ ಶಾಲೆಗಳನ್ನು ಹೊರತುಪಡಿಸಿ ಎಲ್ಲ ಕೈಗಾರಿಕೆ-ಇತರ ಚಟುವಟಿಕೆಗಳು ಆರಂಭಿಸಲು ಸರ್ಕಾರ ಅನುಮತಿ ನೀಡಲಿದೆ. ತುರ್ತಾಗಿ ರಾಷ್ಟçದಲ್ಲಿ ಆರ್ಥಿಕ ಚಟುವಟಿಕೆಗಳ ಪುನರಾರಂಭ ಅಗತ್ಯವಿದೆ. ಬರುವ ದಿನಗಳಲ್ಲಿ ಕಾರ್ಮಿಕರ ಮಕ್ಕಳಿಗೆ ಕೈಗಾರಿಕಾ ಪ್ರದೇಶಗಳಲ್ಲಿ ವಸತಿಯುತ ಶಾಲೆಗಳನ್ನು ಆರಂಭಿಸಲು ಕಾರ್ಮಿಕ ಇಲಾಖೆ ಚಿಂತನೆ ಮಾಡುತ್ತಿದೆ ಎಂದರು.
ಸಭೆಯ ನಂತರ ಕಾರ್ಮಿಕ ಇಲಾಖೆಯ ಮದುವೆಯ ಧನ ಸಹಾಯ, ಶೈಕ್ಷಣಿಕ ಧನ ಸಹಾಯ, ಅಂತ್ಯ ಸಂಸ್ಕಾರ ಧನಸಹಾಯ, ವಾಣೀಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಧನಸಹಾಯದ ಚೆಕ್ ಫಲಾನುಭವಿಗಳಿಗೆ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಹಮಾಲರು, ಅಕ್ಕಸಾಲಿಗರು, ಮಡಿವಾಳರು, ಟೈಲರ್, ಕ್ಷೌರಿಕರಿಗೆ ಅವರು ಸ್ಮಾರ್ಟ್ಕಾರ್ಡ್ ವಿತರಿಸಿದರು.
ಸಭೆಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಕಾರ್ಮಿಕ ಇಲಾಖೆಯ ಉಪಕಾರ್ಮಿಕ ಆಯುಕ್ತ ವೆಂಕಟೇಶ ಶಿಂಧಿಹಟ್ಟಿ, ಸಹಾಯಕ ಕಾರ್ಮಿಕ ಆಯುಕ್ತೆ ಮೀನಾ ಪಾಟೀಲ, ಕಾರ್ಮಿಕ ಇಲಾಖೆಯ ವಿವಿಧ ಅಧಿಕಾರಿಗಳು, ಕಾರ್ಮಿಕ ಸಂಘಟನೆಯ ಮುಖಂಡರು, ಅಸಂಘಟಿತ ವಲಯದ ಸಂಘಟನೆಗಳ ಪ್ರತಿನಿಧಿಗಳು, ವಿವಿಧ ಯೋಜನಾ ಫಲಾನುಭವಿಗಳು ಭಾಗವಹಿಸಿದ್ದರು.