ಮಂಗಳೂರು: ನಗರ ಸೇರಿದಂತೆ ಗ್ರಾಮೀಣ ಭಾಗದ ಕೆಲವೆಡೆ ಕೆಲವು ಟ್ರಾಫಿಕ್ ಪೊಲೀಸರಿಂದ ಸಂಚಾರ ನಿಯಮ ಪಾಲನೆ ಹೆಸರಿನಲ್ಲಿ ಹಣಪೀಕಿಸುವ ಘಟನೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆರೋಪಗಳು ಕೇಳಿಬಂದಿವೆ. ಕೆಲವರ ಈ ತಪ್ಪು ನಡೆಯಿಂದಾಗಿ ನಿಷ್ಠಾವಂತ ಅಧಿಕಾರಿಗಳು ಮತ್ತು ಇಡೀ ಇಲಾಖೆಯನ್ನೇ ಜನತೆ ಅನುಮಾನದಿಂದ ನೋಡುವಂತಾಗಿದೆ.
ಅನೇಕ ಸಂಚಾರಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಾ, ಕೊರೋನಾ ಬಿಕ್ಕಟ್ಟಿನ ನಡುವೆ ಆಪತ್ತಿಗೆ ಎದೆಯೊಡ್ಡಿ ಮುಂಚೂಣಿಯ ಕೊರೋನಾ ವಾರಿಯರ್ಸ್ ಆಗಿ ಮಾನವೀಯ ನೆಲೆಯಲ್ಲಿ ಕೆಲಸ ಮಾಡುತ್ತಿರುವಾಗಲೇ ಕೆಲವರಿಂದ ಇಂತಹ ಅಮಾನವೀಯ ಕೃತ್ಯಗಳು ನಡೆಯುತ್ತಿವೆ ಎಂದರೆ ನಿಜಕ್ಕೂ ತಲೆತಗ್ಗಿಸುವ ವಿಚಾರ.
ಲೈಸೆನ್ಸ್, ಹೆಲ್ಮೆಟ್, ಹೊಗೆ ತಪಾಸಣೆ…
ಕಾನೂನನ್ನು ಬದಿಗಿರಿಸಿ ವಾಹನ ಸವಾರರಿಂದ ಹಣ ಪೀಕಿಸುವ ಘಟನೆಗಳು ಮುಲಾಜಿಲ್ಲದೆ ನಡೆಯುತ್ತಲೇ ಇವೆ. ಇದರಿಂದ ಹೆಚ್ಚು ಸಮಸ್ಯೆಗೆ ಸಿಲುಕುವವರು ಬಡಪಾಯಿ ದ್ವಿಚಕ್ರ ವಾಹನ ಸವಾರರು. ಆಯಕಟ್ಟಿನ ಜಾಗಗಳಲ್ಲಿ ನಿಲ್ಲುವ ಇವರಿಗೆ ದ್ವಿಚಕ್ರ ವಾಹನ ಸವಾರರೇ ಮೊದಲ ಟಾರ್ಗೆಟ್. ಬೈಕ್ ನಿಲ್ಲಿಸಿ ಲೈಸೆನ್ಸ್, ಹೆಲ್ಮೆಟ್, ಹೊಗೆ ತಪಾಸಣೆ, ಇನ್ಶೂರೆನ್ಸ್, ಮಾಸ್ಕ್ ಹೀಗೆ ಒಂದಲ್ಲ ಒಂದು ವಿಷಯನ್ನಿಟ್ಟುಕೊಂಡು ಸತಾಯಿಸುತ್ತಾರೆ. ಸಂಚಾರಿ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವುದು ಒಪ್ಪತಕ್ಕ ವಿಚಾರವೇ ಸರಿ. ಆದರೆ ಬಹುತೇಕ ಕಡೆಗಳಲ್ಲಿ ದಂಡ ಪಾವತಿಗೆ ರಶೀದಿ ನೀಡುವುದಿಲ್ಲ. ಹಣ ಪೀಕಿಸುವುದೇ ಇಲ್ಲಿ ಕೆಲವರಿಗೆ ಮುಖ್ಯವಾದಂತಿದೆ. ನಿಯಮ ಉಲ್ಲಂಘನೆಗೆ ಅನುಗುಣವಾಗಿ ದಂಡ ಕೇಳುವ ಅವರು ಚೌಕಾಶಿ ಮಾಡುತ್ತಾ ಮಾಡುತ್ತಾ ‘ಅಷ್ಟಿಲ್ಲದಿದ್ದರೆ ಇದ್ದಷ್ಟು ಕೊಡಿ’ ಎಂದು ವಸೂಲಿ ಮಾಡಿ ಕಳಿಸಿಬಿಡುತ್ತಾರೆ.
ನಂತೂರಿನಲ್ಲಿ ನಡೆಯಿತೊಂದು ಘಟನೆ…
ಹಣ ಪೀಕಿಸುವ ಇಂತದ್ದೇ ಘಟನೆ ಶುಕ್ರವಾರ ನಗರದ ನಂತೂರು ಬಳಿಯೂ ನಡೆದಿದೆ. ಬೈಕ್ ಸವಾರರೊಬ್ಬರನ್ನು ನಿಲ್ಲಿಸಿದ ಟ್ರಾಫಿಕ್ ಸಿಬ್ಬಂದಿಯೊಬ್ಬರು ಅವರಲ್ಲಿ ದಾಖಲೆ ಕೇಳಿದ್ದಾರೆ. ಎಲ್ಲಾ ದಾಖಲೆ ನೀಡಿದ ಆ ಸವಾರರು ಹೊಗೆ ತಪಾಸಣಾ ಪ್ರಮಾಣ ಪತ್ರವನ್ನು ಮನೆಯಲ್ಲಿ ಮರೆತು ಬಂದಿದ್ದರು. ಇ-ಯಂತ್ರದ ಮೂಲಕ ಎಲ್ಲಾ ದಾಖಲೆಯನ್ನು ಪರಿಶೀಲಿಸುವಂತೆ ಹೇಳಿದರೂ ಅದಕ್ಕೆ ಸೊಪ್ಪು ಹಾಕಿಲ್ಲ. ಹೊಗೆ ತಪಾಸಣಾ ಪ್ರಮಾಣ ಪತ್ರ ತಕ್ಷಣಕ್ಕೆ ಇಲ್ಲದಿರುವುದಕ್ಕೆ ಎಸ್ಐಯೂ ಅಲ್ಲ… ಓರ್ವ ಸಿಬ್ಬಂದಿ 2,000 ಫೈನ್ ಕೇಳಿದ್ದಾರೆ. ಅಷ್ಟು ಹಣ ಇಲ್ಲವೆಂದಾಗ 500 ಕೇಳಿದ್ದಾರೆ. ಅಷ್ಟೂ ಹಣ ಆ ಸವಾರರಲ್ಲಿ ಇರಲಿಲ್ಲ. ಕೊನೆಗೆ ಇದ್ದ 200 ರೂಪಾಯಿಯನ್ನು ಪಡೆದು ಕಳುಹಿಸಿದ್ದಾರೆ. ಇದು ಒಂದು ಘಟನೆಯಷ್ಟೆ. ಇಂತಹ ಹತ್ತಾರು ಘಟನೆಗಳು ನಿತ್ಯ ನಡೆಯುತ್ತಲೇ ಇವೆ. ಇಷ್ಟೆಲ್ಲ ‘ವಹಿವಾಟು’ ನಡೆಯುತ್ತಿದ್ದರೂ ಇದು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬರುತ್ತಿಲ್ಲವೇ? ಬಂದರೂ ಅವರೂ ಇದಕ್ಕೆ ಸಾಥ್ ನೀಡುತ್ತಿದ್ದಾರೆಯೇ? ಎಂಬ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ.
ಗ್ರಾಮೀಣ ಭಾಗದಲ್ಲೂ ಇದೇ ರೀತಿ!
ಟ್ರಾಫಿಕ್ ಪೊಲೀಸರು ವಾಹನ ಸವಾರರಿಂದ ಹಣ ಪೀಕುವುದು ಕೇವಲ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಗ್ರಾಮೀಣ ಭಾಗದಲ್ಲೂ ಇದು ಹೆಚ್ಚಾಗುತ್ತಿದೆ. ಮೂಲ್ಕಿ, ಪಡುಬಿದ್ರಿ, ಬಂಟ್ವಾಳ, ಮುಡಿಪು, ಕೊಣಾಜೆ ಸೇರಿದಂತೆ ಹೆದ್ದಾರಿ ಬದಿಯೂ ನಡೆಯುತ್ತಿದೆ.
ನಿಯಮಗಳ ಬಗ್ಗೆ ಅಷ್ಟಾಗಿ ಗೊತ್ತಿರದ ಗ್ರಾಮೀಣ ಭಾಗದ ಜನ ಕಿಸೆಯಲ್ಲಿದ್ದಷ್ಟು ಹಣ ನೀಡಿ ಹೋಗುತ್ತಿದ್ದಾರೆ. ಬೈಕ್ನ ಯಾವುದಾದರೊಂದು ದಾಖಲೆ ಇಲ್ಲದಿದ್ದರೆ 50 ಅಥವಾ ನೂರು ರೂಪಾಯಿ ಯಾದರೂ ಸರಿ ಪಡೆಯದೆ ಬಿಡುವುದಿಲ್ಲ. ಇಂತಹ ಘಟನೆಗಳು ಇಲಾಖೆಗೆ ಕಪ್ಪುಚುಕ್ಕೆಯಾಗುತ್ತಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದು ಒಳಿತು. ಕೆಲವೊಮ್ಮೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಾರದೆಯೇ ಇಂತಹ ಘಟನೆಗಳು ನಡೆಯುತ್ತಿರಬಹುದು. ಇವೆಲ್ಲವನ್ನು ಪತ್ತೆಹಚ್ಚುವಂತಾ ಗಬೇಕು. ಪೊಲೀಸ್ ಸಿಬ್ಬಂದಿಗಳು ಅಧಿಕಾರಿಗಳಂತೆ ಬಿಂಬಿಸಿಕೊಳ್ಳುವುದಕ್ಕೂ ಕಡಿವಾಣ ಬೀಳಬೇಕಿದೆ.
ಸಿಬ್ಬಂದಿಗಳಿಗೆ ಅಧಿಕಾರ ಕೊಟ್ಟವರು ಯಾರು??
ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಫೈನ್ ಹಾಕಬೇಕೆಂದರೆ ಅಲ್ಲಿ ಎಎಸ್ಐ ಅಥವಾ ಅವರಿಗಿಂತ ಮೇಲಿನ ಅಧಿಕಾರಿಗಳು ಇರಬೇಕೆಂಬುದು ನಿಯಮ. ಆದರೆ ಕೆಲವೆಡೆ ಎಎಸ್ಐಗಳು ಇರುವುದೇ ಇಲ್ಲ. ಕೇವಲ ಪೊಲೀಸ್ ಸಿಬ್ಬಂದಿಗಳೇ ಅವರ ಜವಾಬ್ದಾರಿ ನಿರ್ವಹಿಸಿಬಿಡುತ್ತಾರೆ! ಹಾಗಾದರೆ ಈ ಅಧಿಕಾರ ಸಿಬ್ಬಂದಿಗಳಿಗೆ ಕೊಟ್ಟವರಾರು?
ವಾಹನ ‘ತಪಾಸಣೆ’ಗಾಗಿ ರಸ್ತೆಯಲ್ಲಿ ಬೈಕ್ ಎಳೆದು ನಿಲ್ಲಿಸುವ ಸಿಬ್ಬಂದಿಗಳು!
ಗಲ್ಲಿಯಲ್ಲಿ ನಿಲ್ಲುವ ಪೊಲೀಸ್ ಸಿಬ್ಬಂದಿಗಳು ಕೆಲವೊಮ್ಮೆ ಒಮ್ಮೆಲೆ ಲಾಟಿ ಹಿಡಿದು ರಸ್ತೆಗೆ ಬಂದು ಬೈಕ್ಗಳನ್ನು ಅಡ್ಡ ಹಾಕುವುದಿದೆ. ಇದರಿಂದ ಅಪಘಾತಗಳೂ ಸಂಭವಿಸುತ್ತಿವೆ. ಇತ್ತೀಚೆಗೆ ಕುಪ್ಪೆಪದವು ಬಳಿ ಬೈಕ್ನಲ್ಲಿ ಸಾಗುತ್ತಿದ್ದ ದಂಪತಿಯನ್ನು ಪೊಲೀಸರು ಬೈಕ್ ನಿಲ್ಲಿಸಲು ಲಾಠಿ ಹಿಡಿದು ಮುಂದೆ ಬಂದಿದ್ದಾರೆ. ಇದರಿಂದ ಒಮ್ಮೆಲೆ ಗಲಿಬಿಲಿಗೊಂಡ ಸವಾರ ಬೈಕ್ನ್ನು ಎರ್ರಾಬಿರ್ರಿಯಾಗಿ ಚಲಾಯಿಸಿದ್ದು, ಪಾದಚಾರಿಯೊಬ್ಬರ ಕಾಲ ಮೇಲೆಯೇ ಹೋಗಿದೆ. ಪಾಪ ಆ ವ್ಯಕ್ತಿ ಈಗಲೂ ಅಪಘಾತದಿಂದ ಚೇತರಿಸಿಕೊಂಡಿಲ್ಲ. ಇಂತಹ ಅವಘಡ ಗಳು ಪೊಲೀಸರಿಂದಲೇ ಆಗಿದೆ ಎಂದಾದರೆ ಆಸ್ಪತ್ರೆಯನ್ನು ಖರ್ಚು ವೆಚ್ಚವನ್ನು ಅವರೇ ಭರಿಸಬೇಕಲ್ಲವೇ? ಆದರೆ ಕೆಲವು ಆರಕ್ಷಕರಿಂದ ಬಡಪಾಯಿ ಸವಾರರಿಗೆ ರಕ್ಷಣೆ ಇಲ್ಲದಂತಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಕಳೆದು ಹೋಗುತ್ತಿರುವ ಗೌರವವನ್ನು ಮರುಸ್ಥಾಪಿಸಬೇಕಿದೆ.
ಯಾರು ಹೊಣೆ?
ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದು ತಪ್ಪು , ಆದರೆ ನಿಯಮ ಉಲ್ಲಂಘಿಸಿದರೆಂಬ ನೆಪವೊಡ್ಡಿ ಪೊಲೀಸರು ವಾಹನಗಳನ್ನು ಹಿಡಿದು ಎಳೆದಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ? ಇತ್ತೀಚೆಗೆ ಕುಪ್ಪೆಪದವಿನಲ್ಲಿ ವಾಹನ ಸವಾರನ ವಾಹನವನ್ನು ಪೊಲೀಸ್ ಎಳೆದ ಕಾರಣದಿಂದಾಗಿ ನನ್ನ ಮಿತ್ರರೊಬ್ಬರ ಕಾಲಿಗೆ ಗಂಭೀರ ಗಾಯವಾಯಿತು ಇಂತಹ ಘಟನೆಗಳಿಗೆ ಯಾರು ಹೊಣೆ?
ಗಣೇಶ್ ಪಾಕಜೆ ಕುಪ್ಪೆಪದವು