ಕೋಲಾರ: ಕೋವಿಡ್-೧೯ರ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರ್ಕಾರದ ಸೂಚನೆಯಂತೆ ಮಾಡಲಾದ ಸಂಡೆ ಕರ್ಫ್ಯೂ ಯಶಸ್ವಿಯಾಗಿದ್ದು, ಎಪಿಎಂಸಿ ಮಾರುಕಟ್ಟೆ ಸೇರಿದಂತೆ ನಗರದಲ್ಲಿ ಅಂಗಡಿ ಮುಂಗಟ್ಟು,ವಾಹನ ಸಂಚಾರ ಬಂದ್ ಆಗಿತ್ತು.
ಹಸಿರುವಲಯದಲ್ಲಿದ್ದ ಕೋಲಾರ ಜಿಲ್ಲೆಯಲ್ಲೂ ಸೋಂಕಿತರ ಸಂಖ್ಯೆ ೨೫೦ರ ಗಡಿ ದಾಟಿದ್ದು, ಜನತೆಯಲ್ಲೂ ಆತಂಕ ಮನೆ ಮಾಡಿದೆ, ಈ ಹಿನ್ನಲೆಯಲ್ಲಿ ಸಂಡೆ ಕರ್ಫ್ಯೂಗೆ ಬೆಂಬಲ ವ್ಯಕ್ತವಾಯಿತು.
ಕೊರೋನಾ ಮಾರಕತೆ ಅರಿತಿರುವ ಜನತೆ ಇಂದು ಬೆಳಗ್ಗೆ ಮನೆಬಿಟ್ಟು ಹೊರ ಬರಲೇ ಇಲ್ಲ, ನಗರದ ಎಲ್ಲಾ ರಸ್ತೆಗಳು ಬಿಕೋ ಎನ್ನುತ್ತಿದ್ದು, ಅಂಗಡಿ,ಮುಂಗಟ್ಟುಗಳು, ಹೋಟೆಲ್,ಮಾಲ್,ರಸ್ತೆ ಬದಿ ವ್ಯಾಪಾರ, ತರಕಾರಿ ಮಾರುಕಟ್ಟೆ, ಚಿತ್ರಮಂದಿರಗಳು ಸಂಪೂರ್ಣ ಬಂದ್ ಆಗಿತ್ತು.
ನಗರದ ಸದಾ ಜನನಿಬಿಡ ಎಂಜಿ ರಸ್ತೆ, ದೊಡ್ಡಪೇಟೆ, ಕಾಳಮ್ಮ ಗುಡಿ ಬೀದಿ, ಅಮ್ಮವಾರಿಪೇಟೆ, ಬಸ್ನಿಲ್ದಾಣ ವೃತ್ತಗಳು ಇಂದು ಜನರಿಲ್ಲದೇ ಬಿಕೋ ಎನ್ನುತ್ತಿತ್ತು.
ಮಾಂಸದಂಗಡಿಗಳ ವಹಿವಾಟು ಜೋರು
ಸಂಡೇ ಕರ್ಫ್ಯೂ ಹಿನ್ನಲೆಯಲ್ಲಿ ಜನ ಮನೆಯಲ್ಲೇ ಉಳಿದುಕೊಂಡಿರುವ ಕಾರಣ ಭಾನುವಾರದ ಮಾಂಸದ ವ್ಯಾಪಾರ ಜೋರಾಗಿಯೇ ನಡೆದಿತ್ತು. ಹಾಲು, ಔಷಧಿಗಳ ದಿನಸಿ ಅಂಗಡಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಬಂದ್ ಆಗಿತ್ತು.
ಬಸ್,ವಾಹನಗಳ ಓಡಾಟ ನಿಷೇಧ
ಸಾರಿಗೆ ಸಂಸ್ಥೆ ಬಸ್ಸುಗಳನ್ನು ರಸ್ತೆಗಿಳಿಸದ ಕಾರಣ ನಗರದ ಸಾರಿಗೆ ಸಂಸ್ಥೆ ಬಸ್ನಿಲ್ದಾಣದಲ್ಲಿ ಬಸ್ಸುಗಳಿಲ್ಲದೇ ಖಾಲಿಖಾಲಿಯಾಗಿತ್ತು. ಇಡೀ ನಗರದಲ್ಲಿ ಆಟೋಸಂಚಾರವೂ ರದ್ದಾಗಿದ್ದು, ಅದೃಷ್ಟಕ್ಕೆಂಬಂತೆ ಒಂದೋ ಎರಡೋ ಆಟೋಗಳು ಅಲ್ಲಲ್ಲಿ ಕಂಡು ಬಂದವಾದರೂ ಪೊಲೀಸರನ್ನು ಕಂಡೊಡನೆ ಮಾಯವಾದವು.
ಭಾನುವಾರವಾದ್ದರಿಂದ ಸರ್ಕಾರಿ ಕಚೇರಿಗಳು ಬಂದ್ ಆಗಿತ್ತು. ದ್ವಿಚಕ್ರವಾಹನಗಳು ಅಲ್ಲೊಂದು,ಇಲ್ಲೊಂದು ಓಡಾಡಿದ್ದು ಬಿಟ್ಟರೆ ನಗರದಲ್ಲಿ ಯಾವುದೇ ವಾಹನ ಸಂಚಾರ ಕಂಡು ಬರಲೇ ಇಲ್ಲ.
ನಾಗರೀಕರು ತಮಗೆ ಅಗತ್ಯವಾದ ವಸ್ತುಗಳನ್ನು ಶನಿವಾರವೇ ಖರೀದಿಸಿದ್ದರಿಂದಾಗಿ ಇಂದು ಯಾವುದೇ ತೊಂದರೆಗೆ ಒಳಗಾಗಲಿಲ್ಲ. ಅಲ್ಲಲ್ಲಿ ಮೆಡಿಕಲ್ ಸ್ಟೋರ್, ಹಾಲಿನ ಬೂತ್ ತೆರೆದಿದ್ದು ಕಂಡು ಬಂತಾದರೂ ಜನರಿಲ್ಲದೇ ೧೨ ಗಂಟೆ ವೇಳೆಗೆ ಅವೂ ಬಂದ್ ಆದವು.
ಎಪಿಎಂಸಿ ಬಂದ್, ಸ್ಯಾನಿಟೈಸ್ ಸಿಂಪಡಣೆ
ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಟೊಮೋಟೋ ಮಾರುಕಟ್ಟೆಯೂ ಬಂದ್ ಆಗಿದ್ದು, ರೈತರಿಗೆ ಮೊದಲೇ ಮಾಹಿತಿ ನೀಡಿದ್ದರಿಂದಾಗಿ ಯಾರೂ ಮಾರುಕಟ್ಟೆ ಕಡೆ ಸುಳಿಯಲಿಲ್ಲ, ಈ ಸಮಯ ಸದುಪಯೋಗಪಡಿಸಿಕೊಂಡ ಎಪಿಎಂಸಿ ಆಡಳಿತ ಮಂಡಳಿ ಮಾರುಕಟ್ಟೆಯಾದ್ಯಂತ ಸ್ವಚ್ಚತೆ ಹಾಗೂ ಸ್ಯಾನಿಟೈಸ್ ಸಿಂಪಡನೆ ಮಾಡಿತು.
ಯಾವುದೇ ಬಂದ್, ಪ್ರತಿಭಟನೆಗೆ ಸ್ಪಂದಿಸದೇ ವಹಿವಾಟು ನಡೆಸುತ್ತಿದ್ದ ಕ್ಲಾಕ್ಟವರ್ನ ವರ್ತಕರು, ಅಂಗಡಿಗಳವರು ಇಂದು ಬಂದ್ ಮಾಡಿದ್ದರು. ಜತೆಗೆ ಟವರ್ಗೆ ಹೊಂದಿಕೊಂಡಂತಿರುವ ಬಡಾವಣೆಯೇ ಸೋಂಕಿತನ ಸಾವಿನಿಂದ ಸೀಲ್ ಡೌನ್ ಆಗಿದ್ದು, ಅಲ್ಲಿಯೂ ನೀರವ ಮೌನ ಕಂಡು ಬಂತು.
ಒಟ್ಟಾರೆಯಾಗಿ ನಗರದಲ್ಲಿ ಜನತಾ ಕರ್ಫ್ಯೂಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.