ಹೊಸದಿಗಂತ ವರದಿ ಉಡುಪಿ:
ಆತ್ಮಹತ್ಯೆಗೆ ಯತ್ನಿಸಿದ್ದು ಸಾಮಾನ್ಯ ಕಾರ್ಯಕರ್ತನಲ್ಲ, ಸ್ವತಃ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ. ರಾಜಕೀಯ ಒತ್ತಡ ಇದಕ್ಕೆ ಕಾರಣವೆಂಬ ಆರೋಪ ಕೇಳಿ ಬಂದಿದೆ. ಅದೇನೆಂಬುದು ಕರ್ನಾಟಕದ ಜನತೆಗೆ ಗೊತ್ತಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಭಾನುವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ್ ಅವರ ಪತ್ನಿ ಬಹಳ ಆತ್ಮವಿಶ್ವಾಸದಿಂದ ನಮ್ಮ ಸಂಸಾರ ಚೆನ್ನಾಗಿತ್ತು. ರಾಜಕೀಯದ ಒತ್ತಡದಿಂದ ಈ ರೀತಿ ಕಾರಣ ಆಗಿರಬಹುದು ಎಂದಿದ್ದಾರೆ. ನಾನು ವಿರೋಧ ಪಕ್ಷದ ಅಧ್ಯಕ್ಷನಾಗಿದ್ದು ಇದನ್ನು ನೋಡಿಕೊಂಡು, ಕಣ್ಣು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಾ? ಎಂದು ಪ್ರಶ್ನಿಸಿದರು.
ನಾನು ವೀಡಿಯೋ ದಾಖಲೆ ಬಿಡುಗಡೆ ಬಗ್ಗೆ ಏನೂ ಮಾತಾಡಲಿಲ್ಲ. ಈಗಾಗಲೇ ಓರ್ವ ಮಾಧ್ಯಮ ಕಾರ್ಯದರ್ಶಿ ರಾಜಿನಾಮೆ ಕೊಟ್ಟಿದ್ದಾರೆ, ಇನ್ನೊಬ್ಬ ರಾಜಕೀಯ ಕಾರ್ಯದರ್ಶಿಯವರನ್ನು ತೆಗೆದಿದ್ದಾರೆ. ಇದೀಗ ಒಬ್ಬರು ಆತ್ಮಹತ್ಯೆ ಯತ್ನ ಮಾಡಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಅಂದರೆ ರಸ್ತೆಯಲ್ಲಿ ಹೋಗುವವರಲ್ಲ. ಬಿಜೆಪಿಯ ಎಲ್ಲ ರಾಜಕೀಯ ಬೆಳವಣಿಗೆಯ ವೇಳೆ ಸಂತೋಷ್ ಹೆಸರು ಕೇಳಿಬಂದಿತ್ತು. ಅವರ ಎಲ್ಲ ವ್ಯವಹಾರಗಳು ನಮಗೆ ಗೊತ್ತಿಲ್ಲದೆ ಏನಿಲ್ಲ, ಸರಕಾರ ರಚನೆ ವೇಳೆ ಅವರ ಕಾರ್ಯಾಚರಣೆ ನೋಡಿದ್ದೇವೆ. ನನಗೆ ಗೊತ್ತಿರುವ ಮಾಹಿತಿ ತಿಳಿಸಿದ್ದೇನೆ ಎಂದು ಡಿಕೆಶಿ ಹೇಳಿದರು.
ನನಗೆ ತಿಳಿದಿರುವ ವಿಚಾರ ರಾಜ್ಯದ ಜನತೆಗೆ ತಿಳಿಸುವುದು ನನ್ನ ಜವಾಬ್ದಾರಿ. ಗೃಹ ಸಚಿವರು ತನಿಖೆ ಮಾಡುತ್ತೇವೆ ಎಂದಿದ್ದಾರೆ. ಇದರಿಂದ ಸಿಡಿ ಇತ್ತೋ ಇಲ್ವೋ? ರೆಕಾರ್ಡ್ ಇತ್ತೋ ಇಲ್ವೋ? ಎಲ್ಲವೂ ಹೊರಬರಲಿ. ಸಣ್ಣ ವಯಸ್ಸಲ್ಲಿ ಉನ್ನತ ಸ್ಥಾನಮಾನ ಸಿಕ್ಕಿತ್ತು, ಈ ವಯಸ್ಸಲ್ಲಿ ಸುಮ್ನೆ ಯಾರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಒಂದೇ ಅಧಿಕಾರಕ್ಕೆ ತೊಂದರೆ ಆಗಿರಬೇಕು, ಇಲ್ಲ ಹೆಸರಿಗೆ ಕುಂದು ಬಂದಿರಬಹುದು. ಏನು ವ್ಯವಹಾರ, ಏನು ರಾಜಕಾರಣ ಜನರಿಗೆ ಗೊತ್ತಾಗಲಿ ಎಂದರು.
ಈಗಾಗಲೇ ಕೆಲ ಬಿಜೆಪಿ ನಾಯಕರು ಕಿರುಚಾಡುತ್ತಿದ್ದಾರೆ. ನಾನೇನೂ ಈಶ್ವರಪ್ಪ ಸುದ್ದಿ ಮಾತಾಡಿಲ್ಲ. ಯಾರು ಯಾರು ಎಲ್ಲೆಲ್ಲಿ ಏನೇನು ಕೊಟ್ಟಿದ್ದಾರೆ ನಮಗೂ ಗೊತ್ತು. ಆದರೆ ನಮಗೆ ಆವಶ್ಯಕತೆ ಇಲ್ಲದ ವಿಚಾರ ಅಂತ ಸುಮ್ಮನಿದ್ದೇವೆ ಎಂದು ಡಿಕೆಶಿ ಟಾಂಗ್ ನೀಡಿದರು.